ಸುಳ್ಯ:ನಾಡಿನೆಲ್ಲೆಡೆ ಇಂದು ಸಂಭ್ರಮ ಸಡಗರದಿಂದ ನಾಗರ ಪಂಚಮಿ ಆಚರಿಸಲಾಗುತ್ತಿದೆ. ಈ ಹಬ್ಬದ ಆಚರಣೆಯೊಂದಿಗೆ ಸಾಲು ಸಾಲು ಹಬ್ಬಗಳಿಗೆ ನಾಂದಿಯಾಗುತ್ತದೆ. ಪತ್ತನಾಜೆಯ ಬಳಿಕ ಸ್ಥಗಿತಗೊಂಡ ಹಬ್ಬಗಳ ಪರ್ಯಟನೆ ಇಂದು ಆರಂಭವಾಗುತ್ತದೆ. ನಾಗರ ಪಂಚಮಿಯ ಅಂಗವಾಗಿ
ಪ್ರಮುಖ ನಾಗಾರಾಧನಾ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸೇರಿದಂತೆ ವಿವಿಧ ನಾಗಾರಾಧನಾ ಕ್ಷೇತ್ರಗಳಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ ನಡೆಯಿತು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳು, ದೇವಾಲಯಗಳ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ನಾಗರಪಂಚಮಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಾಗದೇವರಿಗೆ ಕ್ಷೀರಾಭಿಷೇಕ, ಜಲಾಭಿಷೇಕ, ಸೀಯಾಳಾಭಿಷೇಕ ಮತ್ತಿತರ ವಿಶೇಷ ಅಭಿಷೇಕ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಪಂಚಮಿ ಅಂಗವಾಗಿ ನಾಗದೇವರಿಗೆ ಹಾಲು, ಸಿಯಾಳಾಭಿಷೇಕ ನಡೆಯಿತು.ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ, ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ದೈವಸ್ಥಾನ, ಅಡ್ಕಾರು ಶ್ರೀ ಸುಬ್ರಹ್ಮಣ್ಯ, ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನ, ಕಾಂತಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನಗಳಲ್ಲಿ ನಾಗರ ಪಂಚಮಿ ಆಚರಿಸಲಾಯಿತು. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.