ಮೈಸೂರು:ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಜಂಬೂ ಸವಾರಿಯು ಬನ್ನಿಮಂಟಪದವರೆಗೆ ಸಾಗಿ ಬಂತು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 7ನೇ ಬಾರಿಗೆ ಅಭಿಮನ್ಯು ಹೊತ್ತು ಹೆಜ್ಜೆ ಹಾಕಿದನು. ಜಂಬೂ ಸವಾರಿಯು ಅರಮನೆಯಿಂದ
ಹೊರಟು, ಜಯಚಾಮರಾಜ ವೃತ್ತ, ಕೆ ಆರ್ ವೃತ್ತ, ಸಯಾಜಿ ರಾವ್ ರಸ್ತೆ, ಆಯುರ್ವೇದ ಆಸ್ಪತ್ರೆಯ ವೃತ್ತ, ತಿಲಕ ನಗರ, ಆರ್ಎಂಸಿ ವೃತ್ತ, ಬಂಬೂ ಬಜಾರ್, ಹೈವೇ ರೋಡ್ ಬನ್ನಿಮಂಟಪ ಮೈದಾನ, ಬನ್ನಿಮಂಟಪದವರೆಗೆ ಸಾಗಿತು. ಕೋಟ್ಯಾಂತರ ಭಕ್ತರು ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾದ ನಾಡದೇವಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡರು. ಜಂಬೂಸವಾರಿ ಪೂರ್ಣಗೊಂಡ ನಂತರ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಲಿದೆ. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ 31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ, ಆಚಾರ-ವಿಚಾರ, ಭೌಗೋಳಿಕ ಹಿನ್ನೆಲೆ ಹಾಗೂ ಇಲಾಖಾವಾರು, ನಿಗಮ ಮಂಡಳಿ , ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತ 51 ಸ್ತಬ್ಧಚಿತ್ರಗಳ ಪ್ರದರ್ಶನಗೊಂಡಿತು.