ಸುಳ್ಯ:ಸಂಸತ್ತು ನಮ್ಮ ದೇಗುಲ. ಸಂಸತ್ತಿನಲ್ಲಿ ನಿನ್ನೆ ನಡೆದ ಘಟನೆ ಖಂಡನೀಯ. ಇದು ದೇಶವನ್ನೇ ಅತಂಕಕ್ಕೆ ಒಳಗಾಗುವವಂತೆ ಮಾಡಿದೆ. ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸತ್ತಿನ ಕಲಾಪ ನಡೆಯುತ್ತಿರುವಾಗಲೇ
ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗಿ ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್ ಹಾರಿಸಿ ದಾಂದಲೆ ಎಬ್ಬಿಸಿದ್ದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದೇ ಸಮಯದಲ್ಲಿ ಸಂಸತ್ನ ಹೊರಗೂ ಇಬ್ಬರು ಪ್ರತಿಭಟನೆ ನಡೆಸಿದ್ದಾರೆ. 22 ವರ್ಷಗಳ ಹಿಂದೆ ಸಂಸತ್ತಿನ ಮೇಲೆ ನಡೆದ ದಾಳಿಯ ದಿನವೇ ಈ ಘಟನೆ ನಡೆದಿದೆ ಎಂಬುದು ಘಟನೆಯ ಗಂಭೀರತೆ ಹೆಚ್ಚಿಸುತ್ತದೆ. ಈ ಘಟನೆಯ ಬಗ್ಗೆ, ಇದರ ಹಿನ್ನಲೆಯ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಘಟನೆಯ ಬಗ್ಗೆ ಸತ್ಯಾಂಶ ಜನರಿಗೆ ತಿಳಿಸಬೇಕು. ಇದರ ಹಿಂದಿರುವ ಶಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಗೋಕುಲ್ದಾಸ್, ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.










