ಸುಳ್ಯ:ಸುಳ್ಯ ತಾಲೂಕಿನಲ್ಲಿ ಹಳದಿ ರೋಗದಿಂದ ಅಡಿಕೆ ಬೆಳೆ ಸಂಪೂರ್ಣ ನಾಶವಾಗಿದೆ. ಆದರೆ ಯಾವುದೇ ಪರಿಹಾರ ದೊರಕಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಆದುದರಿಂದ ಅಡಿಕೆ ಬೆಳೆಗಾರರಿಗೆ ಸ್ಪಂದಿಸದ, ಕೃಷಿ ಉತ್ಪನ್ನಗಳಿಗೆ ಬೆಲೆ ನೀಡದ ರಾಜಕೀಯ ಪಕ್ಷಗಳಿಗೆ ಮತ ನೀಡಬಾರದು.ಆ ಮೂಲಕ ಕೃಷಿಕರು ತಮ್ಮ ಪ್ರತಿಭಟನೆಯನ್ನು ತೋರಿಸಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಡಿಕೆ ಅಡಿಕೆ ಹಳದಿ ರೋಗ ಸಮಸ್ಯೆಗೆ
ಇದುವರೆಗೆ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಸ್ಪಂದಿಸಿಲ್ಲ. ಕೃಷಿ ಉತ್ಪನ್ನಗಳ ಬೆಲೆ ತೀವ್ರ ಕುಸಿಯುತ್ತಾ ಇದೆ.ಅಡಿಕೆ ದರ ಇಳಿಯುತಿದೆ. ರಬ್ಬರ್ ಬೆಲೆ ಪಾತಾಳಕ್ಕೆ ಇಳಿದಿದೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ಏರಿಕೆಗೆ ಕೇಂದ್ರ ಸರಕಾರ ಏನೂ ಮಾಡಿಲ್ಲ. ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರುಗಳು, ಸಂಸದರು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಹೇಳಿದ ಅವರು ವಿದೇಶದಿಂದ ಅಡಿಕೆ ಭಾರತಕ್ಕೆ ಕಳ್ಳ ಸಾಗಾಣಿಕೆ ಆಗುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಅಡಿಕೆ ಹಳದಿ ರೋಗಕ್ಕೆ 50 ಕೋಟಿ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಹಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಹಿಂದಿನ ಬಿಜೆಪಿ ಸರಕಾರ ಘೋಷಣೆ ಮಾಡಿದ 25 ಕೋಟಿ ಮೊದಲು ಬರಲಿ, ಆಮೇಲೆ ಈ ಸರಕಾರದ 50 ಕೋಟಿಯ ಬಗ್ಗೆ ಪ್ರಯತ್ನ ನಡೆಸೋಣ ಎಂದರು.
ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರಿಗೆ ಗಡಿಪಾರು ಆದೇಶ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಅದು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ
ಸರಕಾರ ಕೈಗೊಳ್ಳುವ ಕ್ರಮಗಳು ಅಸ್ಟೇ. ಹಿಂದಿನ ಬಿಜೆಪಿ ಸರಕಾರ ಕೂಡ ಈ ರೀತಿಯ ಕ್ರಮಗಳನ್ನು ಕೈಗೊಂಡಿತ್ತು ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿಗೆ ಸಾಕಷ್ಟು ಅನುದಾನ ದೊರೆಯದ ಸ್ಥಿತಿ ಇದೆ. ಅಭಿವೃದ್ಧಿಗೆ ಅನುದಾನ ಬೇಕು ಎಂಬುದು ಜನಪ್ರತಿನಿಧಿಯಾಗಿ ನನ್ನದೂ ಬೇಡಿಕೆ ಇದೆ. ಸ್ವಲ್ಪ ಸಮಯದಲ್ಲಿ ಎಲ್ಲವೂ ಸರಿ ಹೋಗಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾರ ಕೆ.ಗೋಕುಲ್ದಾಸ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.









