ಬೆಂಗಳೂರು: ಮುಂಗಾರು ಮಾರುತಗಳು ದುರ್ಬಲಗೊಂಡ ಪರಿಣಾಮ ಮುಂದಿನ ಕೆಲವು ದಿನ ರಾಜ್ಯದಲ್ಲಿ ಸಾಧಾರಣ ಮಳೆಯಷ್ಟೆ ಬೀಳಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬಿಪರ್ಜಾಯ್ ಚಂಡಮಾರುತವು ತೇವಾಂಶ ಭರಿತ ಮೋಡಗಳನ್ನು ಸೆಳೆದುಕೊಂಡ ಕಾರಣಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಮಾರುತಗಳು
ದುರ್ಬಲಗೊಂಡಿವೆ. ಇದರಿಂದಾಗಿ ರಾಜ್ಯಾದ್ಯಂತ ಆವರಿಸಲು ಇನ್ನೂ ಸಮಯ ಬೇಕಾಗಲಿದೆ. ಚಂಡಮಾರುತ ಮುಗಿದ ಬಳಿಕ ಮುಂದಿನ ಒಂದು ವಾರದಲ್ಲಿ ಅರಬ್ಬಿ ಸಮುದ್ರದಲ್ಲಿ ಮಾರುತಗಳ ಸೃಷ್ಟಿಗೆ ಪೂರಕ ವಾತಾವರಣ ಉಂಟಾಗುವ ಸಾಧ್ಯತೆ ಇದೆ. ಬಳಿಕ, ಮಾರುತಗಳು ಚುರುಕುಗೊಂಡು ರಾಜ್ಯಾದ್ಯಂತ ವ್ಯಾಪಿಸುವ ಜತೆಗೆ ಉತ್ತಮ ಮಳೆ ತರುವ ನಿರೀಕ್ಷೆ ಇದೆ ಎನ್ನುತ್ತಾರೆ ಹವಾಮಾನ ತಜ್ಞರು.
ಮೂರ್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಮತ್ತು 2022ರ ಜೂನ್ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. 2021ರ ಜೂನ್ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಸುರಿದಿದೆ. ಆದರೆ, ಮೂರು ವರ್ಷಗಳಿಂದ ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗುತ್ತಿದೆ ಎಂದು ಕೃಷಿಕರು, ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದ್ದರೂ ಸರಿಯಾಗಿ ಸಮಯಕ್ಕೆ ಮಳೆ ಬರುತ್ತಿಲ್ಲ. ದಿನದಲ್ಲಿ ಬೀಳುವ ಮಳೆ ಗಂಟೆಗೆ, ವಾರಕ್ಕೆ ಬೀಳುವ ಮಳೆ ದಿನಕ್ಕೆ, ತಿಂಗಳಲ್ಲಿ ಬೀಳುವ ಮಳೆ ವಾರದಲ್ಲಿ ಬೀಳುವಂತಾಗಿದೆ. ಇದಕ್ಕೆ ಹವಾಮಾನ ವೈಪರೀತ್ಯವೇ ಪ್ರಮುಖ ಕಾರಣವಾಗಿದೆ.
ಈ ಮಧ್ಯೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಕೋಲಾರದಲ್ಲಿ ಜೂ 15ರಿಂದ ಜೂ 19ರವರೆಗೆ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರಿನಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.