ಮುಕ್ಕೂರು: ಮೌಲ್ಯಯುತ ಜೀವನ ನಡೆಸಲು ಪ್ರತಿಯೊಬ್ಬ ವ್ತಕ್ತಿಗೂ ಪ್ರಾಥಮಿಕ ಶಾಲೆಯಲ್ಲಿ ಪಡೆದ ಶಿಕ್ಷಣ ಪೂರಕ. ರಾಜಕೀಯ ಕ್ಷೇತ್ರದಲ್ಲಿ ನಾನು ಎತ್ತರದ ಸ್ಥಾನಕ್ಕೆ ಏರಿದ್ದರೂ ನನ್ನೊಳಗೆ ನೈತಿಕತೆ, ಮೌಲ್ಯಗಳು ಉಳಿದುಕೊಳ್ಳಲು ಮುಕ್ಕೂರಿನ ಶಾಲೆಯಲ್ಲಿ ದೊರೆತ ಶಿಕ್ಷಣ ಕಾರಣ ಎಂದು ದ.ಕ.ಲೋಕಸಭಾ ಕ್ಷೇತ್ರದ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.ಮುಕ್ಕೂರು-ಪೆರುವಾಜೆ ಸರಕಾರಿ ಉನ್ನತ್ತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದ.ಕ.ಜಿಲ್ಲೆಯ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಹದಿನೈದು ವರ್ಷಗಳನ್ನು ಪೂರೈಸುತ್ತಿರುವ ಮೊದಲ ಸಂಸದ ನಾನು. ಕಳೆದ ಮೂರು ಅವಧಿಯಲ್ಲಿ 80 ಸಾವಿರ ಕೋ.ರೂ.ಅನುದಾನವನ್ನು ಈ ಜಿಲ್ಲೆಗೆ ತಂದಿದ್ದೇನೆ. ಪ್ಲಾಸ್ಟಿಕ್ ಪಾರ್ಕ್, ಕೋಸ್ಟ್ ಗಾರ್ಡ್ ತರಬೇತಿ ಸೆಂಟರ್, ಎಂಆರ್ ಪಿಲ್ ಅಭಿವೃದ್ಧಿ, ಐದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹತ್ತಾರು ಯೋಜನೆಗಳನ್ನು ಅನುಷ್ಠಾನಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ತಳಮಟ್ಟದ, ಪ್ರಾಥಮಿಕ ಹಂತದ ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹಾಗಾಗಿ ಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು ಎಂದರು.
ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅವರನ್ನು ಸನ್ಮಾನಿಸಲಾಯಿತು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಸಮ್ಮಾನಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಅವರನ್ನು ಗೌರವಿಸಲಾಯಿತು.
ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಶಹಿನಾಜ್, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪುತ್ತೂರು ಕಾನಾವು ಕ್ಲಿನಿಕ್ನ ವೈದ್ಯ ಡಾ. ನರಸಿಂಹ ಶರ್ಮ ಕಾನಾವು ಶುಭ ಹಾರೈಸಿದರು. ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ನ್ಯಾಯವಾದಿ ಜಯಪ್ರಕಾಶ್ ರೈ ಕನ್ನೆಜಾಲು ಉಪಸ್ಥಿತರಿದ್ದರು. ಶಿಕ್ಷಕಿ ಲಲಿತಾ ಕುಮಾರಿ ವರದಿ ವಾಚಿಸಿದರು. ಅತಿಥಿ ಶಿಕ್ಷಕಿ ಸರಿತಾ ದತ್ತಿನಿಧಿ ಪಟ್ಟಿ ವಾಚಿಸಿದರು. ಮುಕ್ಕೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಭಾರ ಮುಖ್ಯಗುರು ಅರವಿಂದ ಕಜೆ ಸ್ವಾಗತಿಸಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ವಂದಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.












