ಸುಳ್ಯ:ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಪುರಾತನ ಹಾಗೂ ಕಾರಣಿಕ ದೇವಾಲಯ ವಾಣಿಯ ಸಮುದಾಯದ ಆರಾಧನಾಲಯ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಡವ ಮಾ.1ರಿಂದ 7ರ ತನಕ ನಡೆಯಲಿದೆ. ಇದರ ಪ್ರಯುಕ್ತ ಸುಳ್ಯ ತಾಲೂಕು ಪಾಟಾಳಿ ಯಾನೆ ಗಾಣಿಗರ ಸೇವಾ ಸಂಘದ ವತಿಯಿಂದ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ಮಾ.3ರಂದು ನಡೆಯಲಿದೆ ಎಂದು ಸುಳ್ಯ ತಾಲೂಕು ಪಾಟಾಳಿ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತ್ತಡ್ಕ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 20 ವರ್ಷಗಳ ಬಳಿಕ
ಕ್ಷೇತ್ರದಲ್ಲಿ ವಿಜ್ರಂಭಣೆಯ ಕಳಿಯಾಟ ಮಹೋತ್ಸವ ನಡೆಯುತಿದೆ. ಕಳಿಯಾಟಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆಯುತಿದೆ. ಪಾಟಾಳಿ ಯಾನೆ ಗಾಣಿಗರ ಸೇವಾ ಸಂಘದ ವತಿಯಿಂದ ಹಸಿರು ವಾಣಿ ಸಮರ್ಪಣೆ ಮಾಡಲಾಗುವುದು. ಮಾ.3ರಂದು ಬೆಳಿಗ್ಗೆ 8 ಗಂಟೆಗೆ ಹಸಿರುವಾಣಿ ಮೆರವಣಿಗೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಹೊರಡಲಿದೆ. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಮಹಿಳೆಯರು ಹಾಗೂ ಪುರುಷರು ಸಮವಸ್ತ್ರದಲ್ಲಿ ಭಾಗವಹಿಸಲಿದ್ದಾರೆ. ವಾಹನ ಮೆರವಣಿಗೆಯಾಗಿ ತೆರಳಿ ಮುಚ್ಚಿಲೋಟ್ ಭಗವತಿ ಕ್ಷೇತ್ರಕ್ಕೆ ತೆರಳಿ ಹಸಿರುವಾಣಿ ಸಮರ್ಪಣೆ ಮಾಡಲಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಫೆ.18ಮತ್ತು 25ರಂದು ಕ್ಷೇತ್ರದಲ್ಲಿ ನಡೆಯುವ ಶ್ರಮದಾನದಲ್ಲಿ ಸುಳ್ಯದಿಂದ ಸಂಘದ ಸದಸ್ಯರು ಭಾಗವಹಿಸಲಿದ್ದಾರೆ. ಕಳಿಯಾಟ ಮಹೋತ್ಸವದ ದಿನಗಳಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹಸಿರುವಾಣಿ ಸಮಿತಿಯ ಗೌರವ ಸಂಚಾಲಕರಾದ ಕಿರಣ್ ಬಿ.ಎಂ.ಬಿಳಿಯಾರು, ಸಂಚಾಲಕರಾದ ಬಾಲಚಂದ್ರ ಅಡ್ಕಾರ್, ಸಹ ಸಂಚಾಲಕರಾದ ಪ್ರದೀಪ್ ಪೆರಾಜೆ, ಕ್ಷೇತ್ರದ ಕರಣಿಕರು ಹಾಗೂ ಲೆಕ್ಕಪಾಲಕರಾದ ಚಂದ ಕುಡೆಕಲ್ಲು, ಸುಳ್ಯ ತಾಲೂಕು ಪಾಟಾಳಿ ಯಾನೆ ಗಾಣಿಗ ಸೇವಾ ಸಂಘದ ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ, ಖಜಾಂಜಿ ವಿಜಯ ಎರ್ಮೆಟ್ಟಿ, ಜೊತೆ ಕಾರ್ಯದರ್ಶಿ ಸೌಮ್ಯ ರಮೇಶ, ಮಹಿಳಾ ಸಮಿತಿ ಸಂಚಾಲಕಿ ಪ್ರೇಮಾ ಚಂದ ಕುಡೆಕಲ್ಲು, ಹಸಿರುವಾಣಿ ಸಮಿತಿಯ ನಾರಾಯಣ ಎಸ್.ಎಂ. ಶಾಂತಿನಗರ, ಪ್ರವೀಣ್ ಕುಮಾರ್ ಜಯನಗರ, ಮಹಾಲಿಂಗನ್ ಬಾಜರ್ತೊಟ್ಟಿ ಉಪಸ್ಥಿತರಿದ್ದರು.










