ಸುಳ್ಯ:ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತೃ ಶಕ್ತಿ ದುರ್ಗಾ ವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 12ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ. 19ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ನ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಳ್ಕರ್ ಹಾಗೂ
ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ತಿಳಿಸಿದ್ದಾರೆ. ಸುಳ್ಯ ಪ್ರಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 12ನೇ ವರ್ಷದ ಮೊಸರುಕುಡಿಕೆ ಉತ್ಸವ ಗೋಪುರ ಮೊಸರು ಕುಡಿಕೆ ಮತ್ತು
ಧಾರ್ಮಿಕ ಸಭೆಯೊಂದಿಗೆ ಅದ್ದೂರಿಯಾಗಿ ಜರುಗಲಿದೆ ಎಂದು ವಿವರಿಸಿದರು. ಚನ್ನಕೇಶವ ದೇವಸ್ಥಾನದ ಮುಂಭಾಗದಿಂದ ಆರಂಭಗೊಳ್ಳುವ ಮೊಸರು ಕುಡಿಕೆ ಉತ್ಸವದ ಶೋಭಾ ಯಾತ್ರೆಗೆ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡಲಿದ್ದಾರೆ. ಬಳಿಕ ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿದ ಅಟ್ಟಿ ಮಡಿಕೆಗಳನ್ನು ಯುವಕರ ತಂಡ ಆಕರ್ಷಕ ಶೋಭಾಯಾತ್ರೆಯ ಮೂಲಕ ಒಡೆಯಲಾಗುತ್ತದೆ. ಸಂಜೆ ನಡೆಯುವ

ಸಮಾರೋಪ ಸಮಾರಂಭದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕರಾದ ಚಂದ್ರಶೇಖರ ತಳೂರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ದೈವ ನರ್ತಕ ನರಸಿಂಗ ಪರವ ಸೋಣಂಗೇರಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲೆಯ ಸಹಕಾರ್ಯದರ್ಶಿ ಪ್ರಮೋದ್ ಕಡಬ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು. ಆ.19ರಂದು ಪೂ. 10ರಿಂದ ಎಣ್ಣೆ ಕಂಬ ಕಾರ್ಯಕ್ರಮ ನಡೆಯಲಿದೆ ಆ.10ರಂದು ವಿದ್ಯಾರ್ಥಿಗಳಿಗೆ ಶ್ರೀಕೃಷ್ಣನ ಚಿತ್ರ ಬಿಡಿಸುವ ಕಾರ್ಯಕ್ರಮ ನಡೆಯಲಿದೆ. ಮೊಸರು ಕುಡಿಕೆ ಉತ್ಸವದಲ್ಲಿ ಭಾಗವಹಿಸುವ ತಂಡಗಳು ಆ. 15 ಮೊದಲು ಹೆಸರು ನೊಂದಾಯಿಸಬೇಕು, ಮೊಸರು ಕುಡಿಕೆ ಸ್ಪರ್ಧೆಯ ತಂಡದಲ್ಲಿ 15 ಜನರರಿಗೆ ಮಾತ್ರ ಅವಕಾಶ ಎಂದು ಶ್ರೀಕಾಂತ್ ಗೋಳ್ವಾಳ್ಕರ್ ಹಾಗೂ ಬಾಲಚಂದ್ರ ಅಡ್ಕಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಸುಳ್ಯ ಪ್ರಖಂಡ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಮೊಸರು ಕುಡಿಕೆ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕಾರ್ಯದರ್ಶಿ ಪಾರ್ವತಿ ಕುಂಚಡ್ಕ, ಉಪಾಧ್ಯಕ್ಷ ಹರಿಪ್ರಸಾದ್ ಸುಲಾಯ, ಮಾತೃಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ, ದುರ್ಗಾ ವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ ಪ್ರಮುಖರಾದ ದೇವಿ ಪ್ರಸಾದ್ ಅತ್ಯಾಡಿ, ವರ್ಷಿತ್ ಚೊಕ್ಕಾಡಿ ಉಪಸ್ಥಿತರಿದ್ದರು.





