ಸುಳ್ಯ: ವಿಶ್ವ ಹಿಂದೂ ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾ ಯಾತ್ರೆ ಸೆ.4ರಂದು ಸುಳ್ಯದಲ್ಲಿ ನಡೆಯಲಿದೆ ಎಂದು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಎ.ವಿ.ತೀರ್ಥರಾಮ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದುಗಳನ್ನು ಒಟ್ಟಾಗಿಸಬೇಕು ಮತ್ತು ಹಿಂದೂಗಳನ್ನು ಸಂರಕ್ಷಣೆ ಮಾಡಬೇಕು ಎಂಬ ದೃಷ್ಠಿಯಲ್ಲಿ
1964 ರಲ್ಲಿ ವಿಶ್ವ ಹಿಂದೂ ಪರಿಷತ್ ಆರಂಭವಾಯಿತು. ಇದೀಗ 60 ವರ್ಷ ಪೂರ್ತಿಯಾಗಿರುವ ಹಿನ್ನಲೆಯಲ್ಲಿ 11ನೇ ವರ್ಷದ ಮೊಸರು ಕುಡಿಕೆ ಉತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣ ಮಾನವ ಕುಲಕ್ಕೆ ಆದರ್ಶ. ಕೃಷ್ಣಾಷ್ಟಮಿ ದಿನ ಆರಂಭಗೊಂಡ ವಿಶ್ವ ಹಿಂದೂ ಪರಿಷದ್ ಸ್ಥಾಪನೆಯ ದಿನದ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ನಡೆಸಲಾಗುತಿದೆ ಎಂದರು.ಸುಳ್ಯದಲ್ಲಿ 17 ಕಡೆಗಳಲ್ಲಿ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಉತ್ಸವ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡು ರಾತ್ರಿ 9 ಗಂಟೆಯ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ಹೇಳಿದರು.
ವಿಶ್ವ ಹಿಂದು ಪರಿಷದ್ ಸುಳ್ಯ ಪ್ತಖಂಡ ಅಧ್ಯಕ್ಷ ಸೋಮಶೇಖರ ಪೈಕ ಮಾತನಾಡಿ ‘ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನದ ಪ್ರಯುಕ್ತ ನಡೆಯುವ ಮೊಸರು ಕುಡಿಕೆ ಉತ್ಸವ ಈ ಭಾರಿ ಅದ್ದೂರಿಯಾಗಿ ನಡೆಸಲಾಗುವುದು. ಸಂಘಟನೆಗೆ 60 ವರ್ಷದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪೂರ್ತಿಗೊಂಡಿರುವುದು ಸಂತಸ ಇನ್ನಷ್ಟು ಸಂತಸ ಹೆಚ್ಚಿಸಿದೆ. ಮೊಸರು ಕುಡಿಕೆ ಉತ್ಸವಕ್ಕೆ ಸರ್ವರ ಸಹಕಾರ ಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ವಿವರ:
ಸೆ.4ರಂದು 2 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಶೋಭಾ ಯಾತ್ರೆಗೆ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡುವರು.ಬಳಿಕ ನಗರದಲ್ಲಿ ಶೋಭಾಯಾತ್ರೆಯ ಮೂಲಕ ತೆರಳಿ 17 ಕಡೆಗಳಲ್ಲಿ ಸ್ಥಾಪಿಸಿದ ಅಟ್ಟಿ ಮಡಿಕೆಗಳನ್ನು ಒಡೆಯಲಾಗುವುದು. ಚೆನ್ನಕೇಶವ ದೇವಸ್ಥಾನದ ಮೈದಾನದಲ್ಲಿ ವಿಶೇಷ ಆಕರ್ಷಣೆಯ ಅಟ್ಟಿ ಮಡಿಕೆ ಸ್ಥಾಪಿಸಲಾಗಿದೆ. ಸಂಜೆ
6ಕ್ಕೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಹಾಗೂ ಖ್ಯಾತ ಅಂಕಣಕಾರಾದ ಪ್ರತಾಪ ಸಿಂಹ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಎ.ವಿ.ತೀರ್ಥರಾಮ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ನಿಕಟ ಪೂರ್ವ ಅಧ್ಯಕ್ಷ ಗಣಪತಿ ಮಜಿಗುಂಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿರಿಯ ದೈವ ನರ್ತಕರಾದ ಕೇಪು ಅಜಿಲ ಗೌರವ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿಹಿಂಪ ಮಂಗಳೂರು ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕರಾದ ಪುನೀತ್ ಅತ್ತಾವರ, ವಿಹಿಂಪ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶೋಭಾಯಾತ್ರೆಯ ಪಥ:
ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಶೋಭಾ ಯಾತ್ರೆ ಚೆನ್ನಕೇಶವ ದೇವಸ್ಥಾನದಿಂದ ಆರಂಭಗೊಂಡು, ಎ.ಪಿ.ಎಂ.ಸಿ. ಕುರುಂಜಿಭಾಗ್, ವೇದಶ್ರೀ ಕಾಂಪ್ಲೆಕ್ಸ್ ಕೆ.ಐ.ಬಿ. ಬಳಿ, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜು ರಸ್ತೆ, ಕುರುಂಜಿಕಾರ್ ವೀಸಾ ಆರ್ಕೆಡ್, ರೈ ಇಂಡಿಯನ್ ಗ್ಯಾಸ್ ಮುಂಭಾಗ, ಶಾಸ್ತ್ರಿ ಸರ್ಕಲ್, ಕಶ್ಯಪ ಕಾಂಪ್ಲೆಕ್ಸ್, ಶ್ರೀಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಆಟೋ ವರ್ಕ್ಸ್ ಮುಂಭಾಗ, ಭಗವತಿ ಹಾರ್ಡ್ವೇರ್ ಮುಂಭಾಗ ಬಳಿಕ ಚೆನ್ನಕೇಶವ ದೇವಸ್ಥಾನದ ಮೈದಾನದ ಬಳಿ ವಿಶೇಷ ಆಕರ್ಷಣೆ ಅಟ್ಟಿ ಮಡಿಕೆ ಒಡೆಯುವ ಮೂಲಕ ಸಮಾಪನಗೊಳ್ಳಲಿದೆ.
ಬಹುಮಾನಗಳು:
ಪ್ರಥಮ ರೂ. 15060/- ಮತ್ತು ಶಾಶ್ವತ ಫಲಕ,ದ್ವಿತೀಯ ರೂ. 10060/- ಮತ್ತು ಶಾಶ್ವತ ಫಲಕ,ತೃತೀಯ ರೂ. 7060/- ಮತ್ತು ಶಾಶ್ವತ ಫಲಕ
ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನ ಇರಲಿದೆ.ಮೊಸರು ಕುಡಿಕೆ ಸ್ಪರ್ಧೆಯ ತಂಡದಲ್ಲಿ 15 ಜನರಿಗೆ ಮಾತ್ರ ಅವಕಾಶವಿದ್ದು, ಶೋಭಾಯಾತ್ರೆಯ ಮಧ್ಯದಲ್ಲಿ ಸದಸ್ಯರ ಬದಲಾವಣೆಗೆ ಅವಕಾಶವಿರುವುದಿಲ್ಲ.
ಸ್ಪರ್ಧೆಯಲ್ಲಿ ಹಿಂದೂ ಯುವಕರಿಗೆ ಮಾತ್ರ ಭಾಗವಹಿಸಲು ಅವಕಾಶ ಇದೆ. ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಪೂರ್ಣವಾಗಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.ಮೊಸರು ಕುಡಿಕೆ ಎತ್ತರ 16 ಫೀಟ್. ಜಿಗಿದು ಮಡಿಕೆ ಒಡೆಯುವಂತಿಲ್ಲ ಎಂದು ಎ.ವಿ.ತೀರ್ಥರಾಮ ಹಾಗೂ ಸೋಮಶೇಖರ ಪೈಕ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಉಪಾಧ್ಯಕ್ಷರಾದ ರವಿಚಂದ್ರ ಕೊಡಿಯಾಲಬೈಲು, ದೇವಿಪ್ರಸಾದ್ ಅತ್ಯಾಡಿ, ಕೋಶಾಧಿಕಾರಿ ನವೀನ್ ಎಲಿಮಲೆ, ಬಜರಂಗದಳ ತಾಲೂಕು ಸಂಯೋಜಕ ಹರಿಪ್ರಸಾದ್ ಎಲಿಮಲೆ, ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ ಪದಾಧಿಕಾರಿಗಳಾದ ಮಂಜುನಾಥ್ ಕಾಟೂರು, ರೂಪೇಶ್ ಪೂಜಾರಿಮನೆ, ಸನತ್ ಚೊಕ್ಕಾಡಿ ಉಪಸ್ಥಿತರಿದ್ದರು.