ನವದೆಹಲಿ: ನಿಗದಿತ ಅವಧಿಗೂ ಮೊದಲೇ ನೈರುತ್ಯ ಮುಂಗಾರು ಇಡೀ ದೇಶವನ್ನು ಆವರಿಸಿದ್ದು ರಾಜಸ್ತಾನ, ಪಂಜಾಬ್ ಮತ್ತು ಹರಿಯಾಣದ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ. ಸಾಮಾನ್ಯವಾಗಿ ಜುಲೈ 8ರ ವೇಳೆಗೆ ಮುಂಗಾರು ಇಡೀ ದೇಶವನ್ನು ವ್ಯಾಪಿಸಬೇಕಿತ್ತು. ಆರು ದಿನ
ಮುಂಚಿತವಾಗಿಯೇ ಭಾನುವಾರದಂದು ಇಡೀ ದೇಶವನ್ನು ಆವರಿಸಿದೆ ಎಂದು ತಿಳಿಸಿದೆ. ಜೂನ್ನಲ್ಲಿ 16 ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು ಮಳೆ ಕೊರತೆ ಎದುರಿಸಿದ್ದವು. ಈ ತಿಂಗಳಿನಲ್ಲಿ ಸರಾಸರಿಗಿಂತಲೂ ಕಡಿಮೆ ಮಳೆ ಸುರಿದಿದೆ.ಅದರಲ್ಲೂ ಬಿಹಾರ ಶೇ 69 ಮತ್ತು ಕೇರಳದಲ್ಲಿ ಶೇ 60ರಷ್ಟು ಮಳೆ ಕೊರತೆಯಾಗಿತ್ತು. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಮಳೆ ಕೊರತೆ ಉಂಟಾಗಿದೆ.
ಜುಲೈನಲ್ಲಿ ಉತ್ತಮ ಮಳೆ ನಿರೀಕ್ಷೆ:
ಜೂನ್ ತಿಂಗಳಲ್ಲಿ ನಿರೀಕ್ಷಿತ ಮಳೆ ಸುರಿಯದಿದ್ದರೂ ಜುಲೈಯಲ್ಲಿ ನಿರೀಕ್ಷೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಕರಾವಳಿಯಲ್ಲಿ ಜು. 4ರಿಂದ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಸೂಚನೆ ಇದೆ.
ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ ಎಂಬುದಾಗಿ ಭಾರ ತೀಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಈ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಜು. 4ರಿಂದ ಮುಂದಿನ ಒಂದು ವಾರ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರವಿವಾರ ಸಂಜೆಯ ಬಳಿಕ ಕರಾವಳಿಯಾದ್ಯಂತ ಮಳೆ ಚುರುಕಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.