ನವದೆಹಲಿ: ದೇಶದಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 25, 26ರ ಒಳಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಸುರಿಯಲಿದೆ. ಬಹು ಭಾಗಗಳಲ್ಲಿ ನೈಋತ್ಯ ಮಾನ್ಸೂನ್
ಮಾರುತಗಳು ಮುನ್ನಡೆಯುವ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಐಎಂಡಿ ಹೇಳಿದೆ. ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಮಹಾರಾಷ್ಟ್ರದ ಮುಂಬೈ, ರಾಯಗಡ್, ಥಾಣೆ ಹಾಗೂ ಹಲವು ಭಾಗಗಳಲ್ಲಿ ಜೂ.24 ರಂದು ಮುಂಗಾರು ಪ್ರವೇಶ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ವಿದರ್ಭದ ಕೆಲವು ಭಾಗಗಳಲ್ಲಿ ಮಳೆ ಸುರಿಯಲಿದೆ.
ಮುಂದಿನ 48 ಗಂಟೆಗಳಲ್ಲಿ ಛತ್ತೀಸ್ಗಢ, ವಾಯವ್ಯ ಬಂಗಾಳ ಕೊಲ್ಲಿಯ ಪ್ರದೇಶಗಳು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶದ ಕೆಲವು ಭಾಗಗಳು, ಉತ್ತರಾಖಂಡ, ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಬೈ ನಗರಕ್ಕೆ ಮುಂಗಾರು ಆಗಮಿಸಿದೆ.ನಿನ್ನೆ ವ್ಯಾಪಕವಾಗಿ ಮಳೆ ಸುರಿದಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್ಡಿಎಂಎ) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಮುಳುಗಡೆ ಪ್ರದೇಶಗಳಲ್ಲಿರುವ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದಾರೆ.