ತಿರುವನಂತಪುರ: ಹೇಮಾ ಸಮಿತಿ ವರದಿ ಬಳಿಕ ಕೇರಳ ಸಿನಿಮಾ ರಂಗದಲ್ಲಿ ಕೋಲಾಹಲವನ್ನೆಬ್ಬಿಸಿರುವ ಸ್ತ್ರೀ ಶೋಷಣೆಯ ಲೈಂಗಿಕ ದೌರ್ಜನ್ಯ ಆಪಾದನೆ, ಬೆಳವಣಿಗೆಗಳ ಬಗ್ಗೆ ಮೆಗಾ ಸ್ಟಾರ್ ಮಾಧ್ಯಮಗಳಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.ತಿರುವನಂತಪುರದಲ್ಲಿ ಕೇರಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.ನಾನು 47ವರ್ಷಗಳಿಂದ
ಮಲಯಾಳಂ ಸಿನಿಮೋದ್ಯಮದಲ್ಲಿದ್ದೇನೆ. ಇಂಥಹ ದೌರ್ಬಾಗ್ಯಕರ ವಿಷಯಗಳ ಸಂಧಿಗ್ಧತೆ ಇದೇ ಮೊದಲು. ಈಗ ಮಲಯಾಳಂ ಸಿನಿಮರಂಗವನ್ನು ಕಾಡಿರುವ ಲೈಂಗಿಕ ಆರೋಪಗಳಿಗೆಲ್ಲ “ಅಮ್ಮ” ಉತ್ತರಿಸಬೇಕೆಂದು ಬಯಸುವುದೇ ಸರಿಯಲ್ಲ. ‘ಅಮ್ಮ ಸುಮಾರು 600ಕಲಾವಿದರು ಸೇರಿ ರೂಪಿಸಿಕೊಂಡ ಕಲಾವಿದರ ಖಾಸಗಿ ಕ್ಷೇಮದ ಸಂಘಟನೆ. ಅದು ಟ್ರೇಡ್ ಯೂನಿಯನ್ ಸ್ವರೂಪದ್ದಲ್ಲ. ಆದ್ದರಿಂದ ಈಗಿನ ಬಿಕ್ಕಟ್ಟು, ಸಮಸ್ಯೆಗಳಿಗೆ ಇಡೀ ಚಿತ್ರರಂಗ ಒಟ್ಟಾಗಿ ಉತ್ತರಿಸಬೇಕು. ಸಿನಿಮದಲ್ಲಿ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಸಹಿತ 21ರಷ್ಟು ಸಂಘಟನೆಗಳಿವೆ. ಇವರೆಲ್ಲರಿಗೂ ಈ ಜವಾಬ್ದಾರಿ ಇದೆ. ಹಾಗೆಂದು ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಯಲಿ. ಈ ಕುರಿತು, ಸರಕಾರ, ತನಿಖಾ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳಲಿದೆ. ಆ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಇಂಥದ್ದೆಲ್ಲ ನಡೆಯಬಾರದಿತ್ತು ಎಂದು ಮೋಹನ್ ಲಾಲ್ ವಿಷಾದ ಪ್ರಕಟಿಸಿದರು.
ಅಮ್ಮ ಅಧ್ಯಕ್ಷ ಸ್ಥಾನ ತ್ಯಜಿಸಿ ನಾನು ಪಲಾಯನಗೈದ ರೀತಿಯ ವರದಿಗಳನ್ನು ಗಮನಿಸಿದೆ. ಇದು ಸರಿಯಲ್ಲ. ಈ ಪ್ರಕರಣಗಳೆಲ್ಲ ವರದಿಯಾಗುವ ವೇಳೆಗೆ ನಾನು ಕೇರಳದಲ್ಲಿರಲಿಲ್ಲ. ಒಂದೆರಡು ಶೂಟಿಂಗ್ ನಡೆಯುತಿತ್ತು. ಜತೆಯಲ್ಲೇ ಪತ್ನಿಯ ಅನಾರೋಗ್ಯದ ಚಿಕಿತ್ಸೆ ಹೊರರಾಜ್ಯದಲ್ಲಿ ನಡೆಯುತಿತ್ತು. ವಿಪರೀತ ಒತ್ತಡದಲ್ಲಿದ್ದೆ. ಸದ್ಯ ಉಂಟಾಗಿರುವ ವಿವಾದದ ಕಾರಣದಿಂದಲೇ ಸಿನಿಮಾ ರಂಗ ತಲ್ಲಣಿಸಿದೆ ಎಂದರು.
ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆಯೇ ಎಂದು ತನಿಖೆ ನಡೆಸಿದ ಹೇಮಾ ಕಮಿಷನ್ ವರದಿಯನ್ನು ನಾನು ಸ್ವಾಗತಿಸುತ್ತೇನೆ.
ಈ ಕಮೀಷನ್ ಮುಂಭಾಗ ನಾನೂ ಕೂಡಾ ಎರಡು ಸಲ ಹಾಜರಾಗಿ ನನಗೆ ಗೊತ್ತಿರುವ ವಿಷಯದ ಹೇಳಿಕೆ ನೀಡಿದ್ದೇನೆ.
ಮಲಯಾಳಂ ಸಿನಿಮ ಕ್ಷೇತ್ರ ಸಾವಿರಾರು ಮಂದಿಯ ಬದುಕಿನ ಭಾಗ. ಚಿತ್ರರಂಗಕ್ಕೆ ಉಂಟಾದ ಕಳಂಕ ತೊಳೆದು ಹೋಗಲಿ, ಸಿನಿಮಾ ರಂಗ ಸ್ವಚ್ಛವಾಗಲಿ ಎಂದರು ಮೋಹನ್ ಲಾಲ್.
ನನಗೆ ಮಾಧ್ಯಮಗಳ ಮುಂದೆ ನಿಮ್ಮ ರೀತಿಯಲ್ಲೇನೂ ಮಾತಾಡಿ ಗೊತ್ತಿಲ್ಲ. ಆ ರೀತಿಯ ಮಾತು ನನಗೊಲಿಯದು. ನನಗೆ ತಿಳಿದ ವಿಚಾರಗಳನ್ನಷ್ಟೇ ನಾನು ಹೇಳಬಲ್ಲೆ ಎಂದರು.