ಸುಳ್ಯ: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮೀಂಜ ಗ್ರಾಮ ಪಂಚಾಯತ್ನ ವಾರ್ಡ್ ವಿಭಜನೆಯ ಸಂದರ್ಭದಲ್ಲಿ ಐತಿಹಾಸಿಕ ಹಿನ್ನಲೆಯಿರುವ ‘ಪಟ್ಟತ್ತಮೊಗರು’ ಸ್ಥಳದ ಹೆಸರನ್ನು ‘ಪಟ್ಟತ್ತೂರು’ ಎಂದು ಬದಲು ಮಾಡಲಾಗುತಿದೆ. ಈ ಹೆಸರು ಬದಲಾವಣೆ ಮಾಡಬಾರದು ಎಂದು ಮೊಗೇರ ಸೇವಾ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ ಸಂಕೇಶ ಹಾಗೂ ಸುಳ್ಯ ಸುಳ್ಯ ತಾಲೂಕು ಮೊಗೇರ ಯುವ ವೇದಿಕೆಯ ಗೌರವಾಧ್ಯಕ್ಷ ಮಹೇಶ್ ಬಂಗ್ಲೆಗುಡ್ಡೆ ಪಟ್ಟತ್ತಮೊಗರು ಎಂಬ ಸ್ಥಳಕ್ಕೆ ಐತಿಹಾಸಿಕ ಹಿನ್ನಲೆ ಇದೆ, ಮೊಗೇರ ಅರಸು ಆಳಿದ ಪ್ರದೇಶವಾದ ಕಾರಣ ಈ ಪ್ರದೇಶಕ್ಕೆ ಪಟ್ಟತ್ತಮೊಗರು ಎಂಬ ಹೆಸರು ಬಂದಿದೆ. ಈ ಪ್ರದೇಶ ಮತ್ತು ಆ ಹೆಸರು ಮೂಲ ಸಾಂಸ್ಕೃತಿಕ ನೆಲೆಗಟ್ಟಿನೊಂದಿಗೆ ಮತ್ತು ಜನರ ಭಾವನಾತ್ಮಕವಾಗಿ ತಳುಕು ಹಾಕಿಕೊಂಡಿದೆ. ದಾಖಲೆಗಳಲ್ಲಿ ಪಟ್ಟತ್ತಮೊಗರು ಎಂದೇ ಪ್ರಸಿದ್ಧಿಯಾಗಿದೆ. ಇದೀಗ ವಾರ್ಡ್ ವಿಭಜನೆಯ ಸಂದರ್ಭ ಹೆಸರು ಪಟ್ಟತ್ತೂರು ಎಂದು ಬದಲಾವಣೆ ಮಾಡಲಾಗುತಿದೆ ಎಂದು ಹೇಳಲಾಗಿದೆ. ಅಲ್ಲಿಯ ಜನರು ಸಂಬಂಧಪಟ್ಟವರನ್ನು ಸಂಪರ್ಕಿಸಿ ಹೆಸರು ಬದಲಾವಣೆ ಮಾಡದಂತೆ ಒತ್ತಾಯಿಸಲಾಗಿದೆ.
ಕರ್ನಾಟಕ ರಾಜ್ಯದ ಮೊಗೇರ ಸಂಘಟನೆಗಳು ಕೂಡ ಹೆಸರು ಬದಲಾವಣೆ ಮಾಡದಂತೆ ಸರಕಾರಗಳನ್ನು ಒತ್ತಾಯಿಸುವುದು ಸೇರಿ ಅಗತ್ಯ ಸಹಾಯವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೊಗೇರ ಸಮುದಾಯಗಳ ಮಧ್ಯೆ ಭಾವಾನಾತ್ಮಕ ಹಾಗೂ ಕೌಟುಂಬಿಕ ಸಂಬಂಧಗಳು ಇವೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನಲೆ ಇರುವ ಈ ಸ್ಥಳನಾಮ ಬದಲಿಸದಂತೆ ಸಂಘಟನೆಯ ವತಿಯಿಂದ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ, ಯುವ ವೇದಿಕೆಯ ಗೌರವಾಧ್ಯಕ್ಷ ಪ್ರಕಾಶ್ ಪಾತೆಟ್ಟಿ ಉಪಸ್ಥಿತರಿದ್ದರು.












