ಸುಳ್ಯ:ಕರ್ನಾಟಕ ರಾಜ್ಯ ಮೊಗೇರ ಸಂಘದ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮೊಗೇರ ಸಂಘದ ವತಿಯಿಂದ ಫೆಬ್ರವರಿ 28 ಮತ್ತು ಮಾರ್ಚ್ 1ರಂದು 2 ದಿವಸಗಳ ಬೃಹತ್ ಸಮಾವೇಶ ‘ಮೊಗೇರ ದುಡಿ ಆಯನ-2026’ ಕಾರ್ಯಕ್ರಮ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು
ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ನಂದರಾಜ ಸಂಕೇಶ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘಕೆ 50 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಸಮಸ್ತ ಮೊಗೇರ ಸಮುದಾಯವು ಸುಳ್ಯದಲ್ಲಿ ಒಟ್ಟು ಸೇರಿ ಮೊಗೇರ ದುಡಿ ಆಯನ-2026 ರಾಜ್ಯ ಸಮ್ಮೇಳನವನ್ನು ಆಚರಿಸಲು ತೀರ್ಮಾನಿಸಿದೆ.
ಸುವರ್ಣ ಸಂಭ್ರಮಾಚರಣೆಯನ್ನು ವೈವಿಧ್ಯಮಯವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ದುಡಿ ಆಯನ ಏರ್ಪಡಿಸಲಾಗಿದೆ. ಅಸ್ಪಶ್ಯತೆ, ಜಾತೀಯತೆ, ಅಸಮಾನತೆ ಮೇಲು ಕೀಳು, ಶ್ರೇಷ್ಠ ಕನಿಷ್ಠ ಅನ್ನುವ ಭೇದ ಇಲ್ಲದೆ ಸ್ವಾಭಿಮಾನದ ಬದುಕು ಕಟ್ಟಿಕೊಂಡು ತುಳುವ ನಾಡಿನ ಸಾಂಸ್ಕೃತಿಕ ಪರಂಪರೆಗೆ ಗಣನೀಯವಾದ ಕೊಡುಗೆಯನ್ನು ಮೊಗೇರ ಸಮಾಜವು ನೀಡುತ್ತಾ ಬಂದಿರುತ್ತದೆ. ಮೊಗೇರ ಸಮಾಜಕ್ಕೆ ಪಾರಂಪರಿಕವಾಗಿ ಬಂದಿರುವ ಹೋರಾಟದ ಪರಂಪರೆ, ಕಲೆ. ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಇವೇ ಮೊದಲಾದ ವಿಷಯಗಳಲ್ಲಿ ಸಮಾಜವನ್ನು ಕಟ್ಟಿ ಬೆಳೆಸುವುದು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಸರಿಸಿ ಹೋಗಿರುವ ಮೊಗೇರ ಸಮಾಜವನ್ನು ತಳಮಟ್ಟದಿಂದ ವಿಶಾಲ ತಳಹದಿಯಲ್ಲಿ ವಿಸ್ತರಣೆಗೊಳಿಸುವುದು. ಹೀಗೆ ನಾನಾ ವಿಚಾರಗಳನ್ನು ಮುಂದಿಟ್ಟುಕೊಂಡು ಐತಿಹಾಸಿಕ ಮೊಗೇರ ದುಡಿ ಆಯನ- 2026 ಬೃಹತ್ ಸಮ್ಮೇಳನವು ನಡೆಯಲಿದೆ.

ಫೆಬ್ರವರಿ 28 ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ಜಿಲ್ಲಾ ಮೊಗೇರ ಸಂಘದ ಸ್ಥಾಪಕರಲ್ಲಿ ಓರ್ವರಾದ ಗಣಪ ಕೆ. ಮೂಡುಶೆಡ್ಡೆ, ಇವರು ಧ್ವಜಾರೋಹಣಗೈಯ್ಯುವರು. ಸಂಘದ ಸ್ಥಾಪಕರಲ್ಲಿ ಇನ್ನೋರ್ವ ಪ್ರಮುಖರಾದ ಶುಭೋದಯ ಕೂಡ್ಲು ಇವರು ದುಡಿ ಆಯನ- 2026 ಕಾರ್ಯಕ್ರಮವನ್ನು ಉದ್ಘಾಟಿಸುವರು.ರಾಜ್ಯಾಧ್ಯಕ್ಷ ನಂದರಾಜ ಸಂಕೇಶ ಅಧ್ಯಕ್ಷತೆ ವಾಹಿಸುವರು. ನಿವೃತ್ತ ಪ್ರಾಧ್ಯಾಪಕ ಡಾ.ಅಭಯಕುಮಾರ್ ದಿಕ್ಸೂಚಿ ಭಾಷಣ ಮಾಡುವರು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಲಿರುವ ಪ್ರತಿನಿಧಿಗಳು ಸಮ್ಮೇಳನದ ವಿವಿಧ ಕಲಾಪಗಳಲ್ಲಿ ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ ಮೊಗೇರ ಸಮಾಜದ ಸಾಂಸ್ಕೃತಿಕ ಪರಂಪರೆಯಾದ ದುಡಿ ಕುಣಿತ, ಪ್ರತಿನಿಧಿ ಸಮಾವೇಶ, ವಿವಿಧ ಸಾಂಸ್ಕೃತಿಕ ನೃತ್ಯ, ಜನಪದ ಕ್ರೀಡೆ, ವಿವಿಧ ಆಟೋಟಗಳ ಪ್ರಕಾರಗಳು, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 1 ರಂದು ಬೆಳಿಗ್ಗೆ 10ಗಂಟೆಗೆ ಸುಳ್ಯದ ಜ್ಯೋತಿ ವೃತ್ತದಿಂದ ಚೆನ್ನಕೇಶವ ದೇವಸ್ಥಾನದವರೆಗೆ ಸ್ಥಬ್ಧಚಿತ್ರ. ತಾಲೀಮ್ ಪ್ರದರ್ಶನ. ಹುಲಿವೇಶ, ಗೊಂಬೆ ನೃತ್ಯಗಳು, ವಾದ್ಯಗೋಷ್ಠಿ ಇತ್ಯಾದಿಗಳನ್ನೊಳಗೊಂಡಂತೆ ಮೊಗೇರರ ವರ್ಣರಂಜಿತ ಮೆರವಣಿಗೆಯು ನಡೆಯಲಿದೆ. ಅಂದು ಗೌಡ ಸಮುದಾಯ ಭವನದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ

ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್ ಫರೀದ್, ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್. ಸಿ ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯಧುವೀರ್ ಒಡೆಯರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಮೊನ್ನಣ್ಣ, ದ.ಕ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳ ಶಾಸಕರಾದ ಸದಸ್ಯರುಗಳು, ವಿವಿಧ ಕ್ಷೇತ್ರದ ಗಣ್ಯ ವ್ಯಕ್ತಿಗಳು ಸೇರಿದಂತೆ ಮೊಗೇರ ಸಮಾಜದ ಗೌರವಾನ್ವಿತ ವ್ಯಕ್ತಿಗಳು ಪಾಲ್ಗೊಳ್ಳುವರು. ಎರಡು ದಿವಸಗಳವರೆಗೆ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಮಸ್ತ ಮೊಗೇರ ಸಮಾಜದ ಬಂಧುಗಳು ಭಾಗವಹಸಬೇಕು ಎಂದು ನಂದರಾಜ ಸಂಕೇಶ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರು ಹಾಗೂ ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಕ, ಸ್ವಾಗತ ಸಮಿತಿಯ ಸಂಚಾಲಕ ಅಚ್ಚುತ ಮಲ್ಕಜೆ, ಪದಾಧಿಕಾರಿಗಳಾದ ಬಾಳಪ್ಪ ಮಣಿಮಜಲು, ಕೇಶವ ಮಾಸ್ಟರ್ ಹೊಸಗದ್ದೆ, ಶಂಕರ್ ಪೆರಾಜೆ, ಬಾಬು ಕನಕಮಜಲು, ಸವಿತಾ ಮುಂಡಾಜೆ. ವಿಜಯಲಕ್ಷ್ಮಿ ಪುತ್ತೂರು ಉಪಸ್ಥಿತರಿದ್ದರು.







