ನವದೆಹಲಿ:ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ್ದಾರೆ. ಈ ಜಾಗತಿಕ ಸಂಘರ್ಷದಿಂದಾಗಿ ಅನಿರೀಕ್ಷಿತ ಸವಾಲುಗಳನ್ನು ಎದುರಿಸಬೇಕಾಗಬಹುದು. ಕೋವಿಡ್-19 ಪರಿಸ್ಥಿತಿ ಎದುರಿಸಿದಂತೆ, ಈ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಅವರು ಕರೆ ನೀಡಿದ್ದಾರೆ.ಇರಾನ್ನಿಂದ ಸುಮಾರು
1,000 ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿರುವ ಭಾರತೀಯರಿಗೆ ಅಗತ್ಯ ಸಹಾಯ ಮಾಡಲಾಗುತ್ತಿದೆ. ಸಂಘರ್ಷ ಪೀಡಿತ ಬಹುತೇಕ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ನಾನು ಎರಡು ಬಾರಿ ಮಾತುಕತೆ ನಡೆಸಿದ್ದೇನೆ.ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಕ್ರಮಕೈಗೊಳ್ಳುತ್ತಿದೆ.
ದೇಶದಲ್ಲಿ ಎಲ್ಪಿಜಿ ಕೊರತೆ ವಿಷಯವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಸರ್ಕಾರವು ಗೃಹ ಬಳಕೆಯ ಎಲ್ಪಿಜಿಗೆ ಆದ್ಯತೆ ನೀಡುತ್ತಿದೆ. ಎಲ್ಪಿಜಿ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಸಾರ್ವಜನಿಕರರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ.ಭಾರತಕ್ಕೆ ಅಗತ್ಯವಿರುವ ಶೇ 60ರಷ್ಟು ಎಲ್ಪಿಜಿಯನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜಾಗರೂಕತೆಯಿಂದ ಇರುವಂತೆ ಎಲ್ಲಾ ಕಾನೂನು ಜಾರಿ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಜೊತೆಗೆ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.
ಆದಷ್ಟು ಬೇಗ ಶಾಂತಿಯುತ ಪರಿಹಾರಕ್ಕೆ ಬರುವಂತೆ ಆ ರಾಷ್ಟ್ರಗಳನ್ನು ಭಾರತ ಒತ್ತಾಯಿಸುತ್ತದೆ. ಪ್ರಸ್ತುತ ಯುದ್ಧದಿಂದ ಅನಿರೀಕ್ಷಿತ ಸವಾಲುಗಳನ್ನು ಎದುರಿಸಬೇಕಾಗಬಹುದು. ಆ ಪರಿಸ್ಥಿತಿ ಇನ್ನೂ ದೀರ್ಘಕಾಲ ಇರಬಹುದು. ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಿದಂತೆ ಈ ಸಂಕಷ್ಟವನ್ನು ಎದುರಿಸಲು ಒಗ್ಗಟ್ಟಿನಿಂದ ಇರಬೇಕು.
ವಾಣಿಜ್ಯ ಹಡಗುಗಳ ಮೇಲಿನ ದಾಳಿ ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಅಂತರರಾಷ್ಟ್ರೀಯ ಜಲಮಾರ್ಗಗಳಿಗೆ ಅಡ್ಡಿಪಡಿಸುವುದು ಸ್ವೀಕಾರಾರ್ಹವಲ್ಲ.ಸಂಘರ್ಷದ ನಡುವೆಯೂ ದೇಶದ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಭಾರತ ನಿರಂತರ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ.
ಭಾರತವು ಸದಾ ಮಾನವೀಯತೆ ಮತ್ತು ಶಾಂತಿಯ ಪರವಾಗಿ ಧ್ವನಿ ಎತ್ತಿದೆ. ಸದ್ಯದ ಪರಿಸ್ಥಿತಿ ಶಮನಕ್ಕೆ ಮಾತುಕತೆ ಹಾಗೂ ರಾಜತಾಂತ್ರಿಕತೆಯೇ ಸೂಕ್ತ ಪರಿಹಾರ.ನಮ್ಮ ಎಲ್ಲಾ ಪ್ರಯತ್ನಗಳು ಉದ್ವಿಗ್ನತೆ ಕಡಿಮೆ ಮಾಡಿ ಸಂಘರ್ಷವನ್ನು ಅಂತ್ಯಗೊಳಿಸುವ ಗುರಿಯನ್ನು ಹೊಂದಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.














