ತಿರುವನಂತಪುರ: ತಿರುವನಂತಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ರಾಜ್ಯದ ಜನರ ಈ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿಯೂ ಬದಲಾವಣೆಯ ಗಾಳಿ ಬೀಸಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ. ಈ ಬದಲಾವಣೆ
ತಿರುವನಂತಪುರ ಮಹಾನಗರಪಾಲಿಕೆ ಚುನಾವಣೆಯಿಂದಲೇ ಆರಂಭವಾಗಿದೆ’ ಎಂದು ಹೇಳುವ ಮೂಲಕ ಅವರು, ಕೇರಳದಲ್ಲಿ ಚುನಾವಣಾ ಕಹಳೆಯನ್ನು ಮೊಳಗಿಸಿದ್ದಾರೆ.
ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದಕ್ಕಾಗಿ ಇಲ್ಲಿನ ಪುತ್ತರಿಕಂಡಂ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.
‘ನಾಲ್ಕು ದಶಕಗಳ ಹಿಂದೆ ಅಹಮದಾಬಾದ್ ಪಾಲಿಕೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆದ್ದಿತ್ತು.1987ರಲ್ಲಿ ಈ ಪಾಲಿಕೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ, ಬಳಿಕ ಗುಜರಾತ್ನಲ್ಲಿ ಅಧಿಕಾರದ ಗದ್ದುಗೆಗೆ ಏರಿತು’ ಎಂದರು.
‘1987ಕ್ಕೂ ಮೊದಲು ಗುಜರಾತ್ನಲ್ಲಿ ಬಿಜೆಪಿ ನಿರ್ಲಕ್ಷಿತ ಪಕ್ಷವಾಗಿತ್ತು.ಕೇರಳದಲ್ಲಿಯೂ ಒಂದು ಸ್ಥಾನದಿಂದ ಪಕ್ಷದ ಪ್ರಯಾಣ ಆರಂಭವಾಗಿದೆ. ರಾಜ್ಯದ ಜನರು ಬಿಜೆಪಿಯಲ್ಲಿ ನಂಬಿಕೆ ಹೊಂದಿದ್ದು, ಇಲ್ಲಿಯೂ ಬಿಜೆಪಿ ಅಧಿಕಾರಕ್ಕೇರಲಿದೆ’ ಎಂದು ಮೋದಿ ಹೇಳಿದರು.
ನಗರದ ಅಭಿವೃದ್ಧಿಗೆ ಬಿಜೆಪಿ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ದೇಶದಲ್ಲಿ ಇದು ಮಾದರಿ ನಗರವಾಗಲಿದೆ’ ಎಂದರು.
ತಿರುವನಂತಪುರ ಜನರು ಬಹುದಿನಗಳ ಹಿಂದೆಯೇ ಬದಲಾವಣೆ ಬಯಸಿದ್ದರು. ನಂಬಿಕೆ ಇಡಿ. ನೀವು ಬಯಸಿರುವ ಬದಲಾವಣೆ ನನಸಾಗಲಿದೆ ಎಂದರು. ರೋಡ್ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದರು.
ಅಮೃತ ಭಾರತ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ:
ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಅಮೃತ ಭಾರತ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಶುಕ್ರವಾರ ಹಸಿರು ನಿಶಾನೆ ತೋರಿದರು. ‘ನೂತನ ರೈಲುಗಳು ವಾರಕ್ಕೊಮ್ಮೆ ಸಂಚರಿಸಲಿದ್ದು ಕೇರಳ ತಮಿಳುನಾಡು ಕರ್ನಾಟಕ ತೆಲಂಗಾಣ ಹಾಗೂ ಆಂಧ್ರಪ್ರದೇಶಗಳ ನಡುವಿನ ಸಂಪರ್ಕ ಹೆಚ್ಚಲಿದೆ’ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ‘ಇದೇ ಮೊದಲ ಬಾರಿಗೆ ಕೇರಳದಲ್ಲಿ ಅಮೃತ ಭಾರತ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ರೈಲುಗಳ ವೇಳಾಪಟ್ಟಿ ಪ್ರಯಾಣದರ ಕುರಿತು ಶೀಘ್ರವೇ ಘೋಷಿಸಲಾಗುವುದು’ ಎಂದೂ ಹೇಳಿದೆ. ತಿರುವನಂತಪುರ ಸೆಂಟ್ರಲ್–ತಾಂಬರಮ್ ತಿರುವನಂತಪುರ ನಾರ್ತ್–ಚರ್ಲಪಲ್ಲಿ ನಾಗರಕೋಯಿಲ್–ಮಂಗಳೂರು ಅಮೃತ ಭಾರತ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರುನಿಶಾನೆ ತೋರಿಸಲಾಗಿದೆ. ಜೊತೆಗೆ ಗುರುವಾಯೂರು–ತ್ರಿಶ್ಶೂರು ಪ್ಯಾಸೆಂಜರ್ ರೈಲು ಸಂಚಾರಕ್ಕೂ ಮೋದಿ ಚಾಲನೆ ನೀಡಿದ್ದಾರೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಮೋದಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.












