ಬೆಂಗಳೂರು: ವಿಧಾನ ಸಭೆಯಿಂದ ವಿಧಾನಪರಿಷತ್ಗೆ ನಡೆಯಲಿರುವ ದೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಹೊರಡಿಸಿರುವ ಪಟ್ಟಿ ಪ್ರಕಾರ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮುಖ್ಯಮಂತ್ರಿಯವರ
ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್, ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ, ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ಶಿವಮೊಗ್ಗ ಮೂಲದ ಬಿಲ್ಕಿಸ್ ಬಾನೊ, ಕಲಬುರಗಿ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ಹಾಗೂ ರಾಯಚೂರು ಕಾಂಗ್ರೆಸ್ ಮುಖಂಡ ಬಸನಗೌಡ ಬಾದರ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ.
ಜೂನ್ 13 ರಂದು 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಗದೀಶ್ ಶೆಟ್ಟರ್ ಅವರಿಂದ ತೆರವಾಗಿರುವ ಸ್ಥಾನಕ್ಕೂ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದ್ದು ಆ ಸ್ಥಾನವೂ ಸೇರಿದಂತೆ ಕಾಂಗ್ರೆಸ್ ಪಟ್ಟಿ ಪ್ರಕಟಿಸಲಾಗಿದೆ. ಜಗದೀಶ್ ಶೆಟ್ಟರ್ ಸ್ಥಾನದಲ್ಲಿ ಬಸನಗೌಡ ಬಾದರ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ.
ವಿಧಾನಸಭೆಯ ಬಲಾಬಲದ ಪ್ರಕಾರ, ಮೊದಲ 11 ಸ್ಥಾನಗಳಲ್ಲಿ ಏಳು ಕಾಂಗ್ರೆಸ್ ಪಾಲಾಗಲಿವೆ. ಬಿಜೆಪಿಗೆ ಮೂರು, ಜೆಡಿಎಸ್ಗೆ ಒಂದು ಸ್ಥಾನ ದೊರಕಲಿವೆ.