ಬೆಂಗಳೂರು: ಸುಳ್ಯದಲ್ಲಿ ತೀವ್ರಗೊಂಡಿರುವ ವಿದ್ಯುತ್ ಸಮಸ್ಯೆಯ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಮತ್ತೆ ಧ್ವನಿ ಎತ್ತಿದ್ದಾರೆ. ಬಜೆಟ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಶಾಸಕರು ವಾರದಲ್ಲಿ ಎರಡನೇ ಬಾರಿ ವಿದ್ಯುತ್ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದರು. ಇದೀಗ ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು ರೈತರು,
ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. 110 ಕೆವಿ ಸಬ್ ಸ್ಟೇಷನ್ ಪೂರ್ತಿ ಆಗದೆ ಇಲ್ಲಿನ ವಿದ್ಯುತ್ ಸಮಸ್ಯೆ ಪರಿಹಾರ ಸಾಧ್ಯವಿಲ್ಲ. ಆದರೆ 110 ಕೆವಿ ಲೈನ್ ಹಾಗೂ ಟವರ್ ಕಾಮಗಾರಿಗೆ ಜಾಗದ
ಸಮಸ್ಯೆಯಿಂದ ಮುಂದುವರಿಯುತ್ತಿಲ್ಲ. ಅರಣ್ಯ ಹಾಗೂ ಸಾರ್ವಕನಿಕರಿಂದ ತಡೆ ಉಂಟಾಗಿದೆ. ಆದುದರಿಂದ ಅರಣ್ಯ ಸಚಿವರು, ಕಂದಾಯ ಸಚಿವರು ಹಾಗೂ ಇಂಧನ ಸಚಿವರು ಆಸಕ್ತಿ ವಹಿಸಿ ಜಾಗದ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಅವರು ಆಗ್ರಹಿಸಿದರು. 110 ಕೆವಿ ಸಬ್ ಸ್ಟೇಷನ್ ಹಾಗೂ ಲೈನ್ ಕಾಮಗಾರಿ ಮುಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಭಾಗೀರಥಿ ಮುರುಳ್ಯ ಒತ್ತಾಯಿಸಿದರು.
ಆನೆದಾಳಿಯಿಂದ ಸುಳ್ಯ ಕ್ಷೇತ್ರದಲ್ಲಿ ಕೃಷಿಕರು ಹೈರಾಣಾಗಿದ್ದಾರೆ. ಆದುದರಿಂದ ಕೃಷಿಕರಿಗೆ ಬೆಳೆ ನಾಶಕ್ಕೆ ಪರಿಹಾರ ಹೆಚ್ಚಿಸಬೇಕು ಮತ್ತು ಕೂಡಲೇ ನೀಡಬೇಕು ಎಂದರು. ಕೃಷಿಗೆ ಮಂಗಗಳ ಉಪಟಳ ಅಧಿಕವಾಗಿದ್ದು ಅವುಗಳನ್ನು ಹಿಡಿದು ಸುರಕ್ಷಿತ ಕಾಡುಗಳಿಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಬಗರ್ ಹುಕುಂ ಯೋಜನೆಯಲ್ಲಿ ಭೂಮಿ ಮಂಜೂರಾದರೂ ಪ್ಲಾಟಿಂಗ್ ಆಗದೆ ಜನರು ಸಮಸ್ಯೆಯಲ್ಲಿದ್ದಾರೆ. ಪ್ಲಾಟಿಂಗ್ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಸುಳ್ಯ ತಾಲೂಕು ಸೇರಿದಂತೆ ರಾಜ್ಯದ ಬಹುತೇಕ ಎಸ್ಸಿ, ಎಸ್ಟಿ ಕಾಲನಿಗಳು ಅಭಿವೃದ್ಧಿ ಕಂಡಿಲ್ಲ. ಈ ಬಗ್ಗೆ ಸರಕಾರ ಸಮರ್ಪಕ ಸರ್ವೇ ನಡೆಸಬೇಕು. ಕಾಲನಿಗಳ ಅಭಿವೃದ್ಧಿಗೆ ಅನುದಾನವೂ ಹೆಚ್ಚಳ ಮಾಡಬೇಕು. ಕಾಲನಿಗಳಲ್ಲಿ ವಾಸಿಸುವ ಭೂಮಿ ಇಲ್ಲದ ಪ್ರತಿ ಕುಟುಂಬಕ್ಕೆ ಕನಿಷ್ಠ 10 ಸೆಂಟ್ಸ್ ಜಾಗ ನೀಡಬೇಕು ಅಂಬೇಡ್ಕರ್ ಭವನ ನಿರ್ಮಾಣದ ಅನುದಾನ ಎರಡು ಕೋಟಿಯಿಂದ 5 ಕೋಟಿ ರೂ.ಗೆ ಹೆಚ್ಚಿಸಬೇಕು.
ಅದೇ ರೀತಿ, ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲಾಗುವ ‘ಶಾದಿ’ ಅನುದಾನದ ಮಾದರಿಯಲ್ಲಿಯೇ ಬಿಪಿಎಲ್ ಕಾರ್ಡ್ ಹೊಂದಿರುವ ಮಧ್ಯಮ ವರ್ಗದ ಮಹಿಳೆಯರಿಗೂ ಮದುವೆಗೆ 50 ಸಾವಿರ ಅನುದಾನ ನೀಡಬೇಕು. ಈ ಪೈಕಿ ದಲಿತ ಸಮುದಾಯದ ಯುವತಿಯರ ಮದುವೆಗೆ 1 ಲಕ್ಷ ರೂ. ಅನುದಾನ ನೀಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನ ಸಿಬ್ಬಂದಿಯ ವೇತನ ಪರಿಷ್ಕರಿಸಿ ಹೆಚ್ಚಳ ಮಾಡಬೇಕು. ಎಂದು ಅವರು ಒತ್ತಾಯ ಮಾಡಿದರು.