ಸುಳ್ಯ:ಕೆಂಪುಕಲ್ಲು ಮತ್ತು ಮರಳು ಅಲಭ್ಯತೆಯ ಸಮಸ್ಯೆಯಿಂದ ಜನ ಸಾಮಾನ್ಯರು ಕಂಗಾಲಾಗಿದ್ದು ಇದರ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಜು.14ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ವಿಧಾನ ಸಭಾ ಕ್ಷೇತ್ರದ ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಪ್ರತಿಭಟನೆ ನಡೆಯಲಿದೆ, ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ
ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮರಳು ಹಾಗೂ ಕೆಂಪು ಕಲ್ಲು ಗಣಿಗಾರಿಕೆ ಮತ್ತು ಸಾಗಾಟದ ಬಗ್ಗೆ ನಿಯಮ ಕಠಿಣವಾಗಿದ್ದು, ಇದರಿಂದ ಮನೆ, ಕಟ್ಟಡ ಮುಂತಾದ ಕಾಮಗಾರಿ ನಡೆಸಲು ಮರಳು, ಕಲ್ಲು ಸಿಗದೆ ಜನ ಸಾಮಾನ್ಯರು ಸಮಸ್ಯೆಗೆ ಸಿಲುಕಿದ್ದಾರೆ. ಅಲ್ಲದೆ ಇದನ್ನೇ ನಂಬಿ ಬದುಕು ಸಾಗಿಸುತ್ತಿರುವವರ ಸಾರಾರು ಕಾರ್ಮಿಕ ಬದುಕು ಇಂದು ಕಷ್ಟಕರವಾಗಿದೆ.
ಆದ್ದರಿಂದ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕರಾವಳಿ ಭಾಗದ ಜನರ ಹಿತ ದೃಷ್ಟಿಯಿಂದ ಈಗಿರುವ ನಿಯಮಗಳನ್ನು ಸರಳೀಕರಣ ಮಾಡಬೇಕು ಎಂದು ಹೇಳಿದರು.

ಕಳೆದ 30 ವರ್ಷಗಳಲ್ಲಿ ಸುಳ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಪುತ್ತೂರು ಶಾಸಕರ ಹೇಳಿಕೆಗೆ ತಿರುಗೇಟು ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು ಸುಳ್ಯದ ಮಾಜಿ ಶಾಸಕರಾದ ಎಸ್.ಅಂಗಾರ ಅವರ ನೇತೃತ್ವದಲ್ಲಿ ಸುಳ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಪುತ್ತೂರು ಶಾಸಕರು ಬಿಜೆಪಿ ಯಲ್ಲಿ ಇದ್ದಾಗ ಸುಳ್ಯದಲ್ಲಿ ಅದ ಅಭಿವೃದ್ಧಿ ಅವರಿಗೆ ಕಾಣುತ್ತಿತ್ತು. ಆದರೆ ಅವರು ಕಾಂಗ್ರೆಸ್ಗೆ ಹೋದಾಗ ಅಭಿವೃದ್ಧಿ ಕಾಣುವುದಿಲ್ಲ ಎಂದು ಹೇಳಿದರು. ಸುಳ್ಯಕ್ಕೆ 110 ಕೆವಿ ಸಬ್ಸ್ಟೇಷನ್ ಹಾಗೂ ಲೈನ್ ಕಾಮಗಾರಿಗೆ ಇರುವ ತಡೆಗಳನ್ನು ನಿವಾರಿಸಿ ಅದಕ್ಕೆ ವೇಗ ನೀಡುವ ಪ್ರಯತ್ನ ನಡೆಸುತ್ತಿದ್ದೇವೆ, ಅಂಬೇಡ್ಕರ್ ಭವನದ ಪೂರ್ತಿ ಮಾಡಲು ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದ ಅವರು
ಸುಳ್ಯಕ್ಕೆ ಬಂದು ಅವರು ಅಭಿವೃದ್ಧಿ ಮಾಡುವುದು ಬೇಡ. ಅವರು ಅವರ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ. ಅವರ ಕ್ಷೇತ್ರದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನೀಡಿದ ಅನುದಾನದ ಗುದ್ದಲಿ ಪೂಜೆ ಈಗ ನಡೆಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಪುತ್ತೂರು ಶಾಸಕರು ಅವರ ಕ್ಷೇತ್ರಕ್ಕೆ 2 ಸಾವಿರ ಕೋಟಿ ಅನುದಾನ ತಂದಿರುವುದಕ್ಕೆ ದಾಖಲೆ ತೋರಿಸಲಿ ಎಂದು ಹೇಳಿದರು. ಪುತ್ತೂರು ಶಾಸಕರು ಸುಳ್ಯಕ್ಕೆ ಒಂದು ದಿನ ಬರಲಿ. ನಾವು ಅವರಿಗೆ ಸುಳ್ಯದ ಪ್ರತಿ ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ತೋರಿಸುತ್ತೇವೆ ಎಂದು ಹೇಳಿದರು. ಸುಳ್ಯದಲ್ಲಿ ಮುಂದೆ ಕಾಂಗ್ರೆಸ್ ಜಯ ಗಳಿಸುತ್ತದೆ ಎಂದು ಹೇಳುವ ಅವರು ಮುಂದಿನ ಬಾರಿ ಪುತ್ತೂರಿನಲ್ಲಿ ಗೆದ್ದು ತೋರಿಸಲಿ ಎಂದು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ, ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಕೋಶಾಧಿಕಾರಿ ಶುಭೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ, ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ ಉಪಸ್ಥಿತರಿದ್ದರು.





