ಸುಳ್ಯ:ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೆಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಧೇವಿ ಅವರ ಜೊತೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ವಿಭಾಗದ ಕಾರ್ಮಿಕರ ಸಮಸ್ಯೆಗಳ ಪರಿಹಾರ ಕುರಿತು ಮಾತುಕತೆ ನಡೆಸಿದ್ದಾರೆ. ಕಾರ್ಮಿಕರ ವಿವಿಧ ಸಮಸ್ಯೆ ಪರಿಹಾರ ಮಾಡಬೇಕು,ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು
ಕಾರ್ಮಿಕ ಸಂಘಟನೆಯಾದ ಕೆಎಫ್ಡಿಸಿ ವರ್ಕರ್ಸ್ ಫೆಡರೇಷನ್ ಶಾಸಕರಿಗೆ ಬೇಡಿಕೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಶಾಸಕರು ಕೆಎಫ್ಡಿಸಿ ಎಂಡಿಯವರ ಜೊತೆ ಮಾತುಕತೆ ನಡೆಸಿದ್ದಾರೆ.
2021-2022ರ 11.67% ಬೋನಸ್, 2023-2024ರ ತುಟ್ಟಿಭತ್ಯೆ, ದಿನವೊಂದರ ವ್ಯತ್ಯಾಸ ರೂ. 3.09, ವೈಟ್ ವಾಶ್-ಟೆಂಪ್ಲೇಟ್ ಮಾರ್ಕ್ ವೇತನಗಳು, ಕಳೆದ ಮಳೆಗಾಲದಲ್ಲಿ 6 ರಿಂದ 9 ದಿನಗಳ ಕಡಿತ ಮಾಡಿದ ವೇತನವನ್ನು ಒದಗಿಸಿ ಕೊಡುವುದು, ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ನಿಯೋಜನೆ ಗೊಂಡ ಸಿಬ್ಬಂದಿಗಳನ್ನು ಮರು ಸೇರ್ಪಡೆ, ವರ್ಗಾವಣೆಗೊಂಡಿದ್ದ ಸಿಬ್ಬಂದಿಗಳನ್ನು ವರ್ಗಾವಣೆ ರದ್ದುಗೊಳಿಸಿರುವುದು, ಫ್ಯಾಕ್ಟರಿಗಳಲ್ಲಿ ಕಾರ್ಮಿಕರ 2016 ರ ಒಪ್ಪಂದದಂತೆ ವರ್ಗಾವಣೆಗೊಂಡ ಕಾರ್ಮಿಕರನ್ನು ಪುನಃ ಕಾರ್ಖಾನೆಗಳಿಗೆ ಸೇರ್ಪಡೆ ಗೊಳಿಸುವುದು, ಕಾರ್ಮಿಕರ ಮನೆಗಳನ್ನು ತಾತ್ಕಾಲಿಕ ದುರಸ್ತಿ ಕಾಮಗಾರಿ ಮಾಡಿಸಿ ನಂತರ ಶಾಶ್ವತ ಪರಿಹಾರ ನೀಡುವುದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
”ರಬ್ಬರ್ ಕಾರ್ಮಿಕರ ಬೋನಸ್, ತುಟ್ಟಿ ಭತ್ಯೆ, ಬಾಕಿ ವೇತನ ನೀಡುವುದು, ಹುದ್ದೆಗಳನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಎಂಡಿಯವರಲ್ಲಿ ಚರ್ಚೆ ನಡೆಸಿದ್ದೇನೆ. ಈ ಸಮಸ್ಯೆಗಳ ಪರಿಹಾರಕ್ಕೆ ಕೆಎಫ್ಡಿಸಿ ಅಧ್ಯಕ್ಷರು ಹಾಗೂ ಸಚಿವರಲ್ಲಿ ಮಾತುಕತೆ ನಡೆಸುತ್ತೇನೆ ಎಂದು ಭಾಗೀರಥಿ ಮುರುಳ್ಯ ಹೇಳಿದ್ದಾರೆ.