ಧರ್ಮಸ್ಥಳ:ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ತೀರ್ಥಹಳ್ಳಿಯಿಂದ 250 ಕಾರುಗಳಲ್ಲಿ ಭಕ್ತರು ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಗೌರವ ಅರ್ಪಿಸಿದರು. ಎಂಟು ಶತಮಾನಗಳಿಂದ ಸತ್ಯ, ಧರ್ಮ, ನ್ಯಾಯ, ನೀತಿ, ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮಿಯರ ಶ್ರದ್ಧಾಕೇಂದ್ರ. ಈ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರಿಗೆ
ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆಗಳಿಗೆ ಕಾಯಕಲ್ಪ, ಮದ್ಯವರ್ಜನ ಶಿಬಿರ, ಜ್ಞಾನದೀಪ, ಜ್ಞಾನಜ್ಯೋತಿ, ಮಹಿಳಾ ಸಬಲೀಕರಣ, ಸ್ವ-ಸಹಾಯ ಸಂಘಗಳು ಇತ್ಯಾದಿ ಹತ್ತು-ಹಲವು ಜನಮಂಗಳ ಕಾರ್ಯಕ್ರಮಗಳಿಂದ

ದೀನ-ದಲಿತರ, ಹಿಂದುಳಿದ ವರ್ಗದವರ ಸರ್ವತೋಮುಖ ಪ್ರಗತಿಯಾಗಿದೆ. ಸರ್ಕಾರ ಮಾಡದ ಸೇವಾ ಕಾರ್ಯಗಳನ್ನು ಹೆಗ್ಗಡೆಯವರು ಮಾಡಿದ್ದಾರೆ ಎಂದು ಅಭಿನಂದಿಸಿದರು.
ಹೆಗ್ಗಡೆಯವರ ಜೊತೆಗೆ ಲಕ್ಷಾಂತರ ಮಂದಿ ಭಕ್ತರ, ಅಭಿಮಾನಿಗಳ ಪೂರ್ಣ ಬೆಂಬಲ ಸದಾ ಇದೆ ಎಂದು ಅವರು ಭರವಸೆ ನೀಡಿದರು.
ಭಕ್ತರ ಶ್ರದ್ಧಾ-ಭಕ್ತಿಯ ಅಭಿಮಾನಕ್ಕೆ ಸಂತಸಪಟ್ಟ ಹೆಗ್ಗಡೆಯವರು ಮುಂದೆಯೂ ಸದಾ ಇದೇ ರೀತಿಯ ಪ್ರೀತಿ-ವಿಶ್ವಾಸ, ಗೌರವ ಇರಲೆಂದು ಆಶಿಸಿದರು.ತೀರ್ಥಹಳ್ಳಿಯ ಪೂಜ್ಯಪಾದ ಚಿಕಿತ್ಸಾಲಯದ ಡಾ. ಜೀವಂಧರ ಕುಮಾರ್, ಬಿ.ಜೆ.ಪಿ.ಯ ನಾಯಕ ನವೀನ್ ಹಾಗೂ ಭಕ್ತರು, ಅಭಿಮಾನಿಗಳು ಉಪಸ್ಥಿತಯರಿದ್ದರು.












