ಸುಳ್ಯ:ಆಲೆಟ್ಟಿ ಗ್ರಾಮದ ಕೂರ್ನಡ್ಕ ಸಮೀಪ ಹೊನ್ನೆಡಿ ಎಂಬಲ್ಲಿ ಪಾಲ ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ ನಾರಾಯಣನ್ ಅವರ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಜಿಲ್ಲೆಯ ಈಸ್ಟ್ ಎಳೇರಿ ಪಂಚಾಯತ್ನ ಚಿಟ್ಟಾರಿಕಾಲ್ ಸಮೀಪದ ಕಡುಮೇನಿಯ ನಾರಾಯಣನ್ (45) ಎಂಬವರು ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಭಾನುವಾರ
ಅಗ್ನಿಶಾಮಕ ದಳ, ಪೊಲೀಸ್, ಎಸ್ಡಿಆರ್ಎಫ್ ತಂಡ ಹಾಗೂ ಸ್ಥಳೀಯ ಈಜುಗಾರರು ನಡೆಸಿದ ಶೋಧ ಸಂದರ್ಭ ಘಟನೆ ನಡೆದ ಸ್ಥಳದಿಂದ ಸುಮಾರು 4 ಕಿ.ಮಿ.ಕೆಳಗೆ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಆಲೆಟ್ಟಿ ಗ್ರಾಮದ ಕೂರ್ನಡ್ಕ ಸಮೀಪ ಹೊನ್ನೆಡಿ ಎಂಬಲ್ಲಿ ಗುರುವಾರ ಸಂಜೆ ಘಟನೆ ಸಂಭವಿಸಿತ್ತು. ಕಂಗಿನ ಪಾಲ ದಾಟುತ್ತಿದ್ದ ಸಂದರ್ಭ ನಾರಾಯಣನ್ ಅವರು ಆಯತಪ್ಪಿ ನೀರಿಗೆ ಬಿದ್ದು ನೀರುಪಾಲಾಗಿದ್ದರು. ಮೂರು ದಿನ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.ಭಾನುವಾರ ನಡೆಸಿದ ಹುಡುಕಾಟದಲ್ಲಿ ಮೃತದೇಹ ಪತ್ತೆಯಾಗಿದೆ.
ನಾರಾಯಣನ್ ಕೆಲವು ದಿನಗಳ ಹಿಂದೆ ಕೂರ್ನಡ್ಕ ಸಮೀಪ ತೋಟದ ಕೆಲಸಕ್ಕೆ ಬಂದಿದ್ದರು.