ಸುಳ್ಯ:ಜನರ ಸಮಸ್ಯೆಗಳನ್ನು ಅರಿತು ಅದರ ಪರಿಹಾರಕ್ಕೆ, ಆಡಳಿತ ಯಂತ್ರ ಚುರುಕುಗೊಳಿಸಲು ಹಾಗೂ ರಾಜ್ಯದಲ್ಲಿ ಜನಸ್ನೇಹಿ ಆಡಳಿತ ನೀಡಲು ರಾಜ್ಯ ಸರಕಾರ ಜನತಾದರ್ಶನ ಹಮ್ಮಿಕೊಂಡಿದೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುಳ್ಯದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದ ಬಳಿಕ ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಲಾದ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಲ್ಲಾ ಸಚಿವರುಗಳು ಜನತಾದರ್ಶನ
ಹಮ್ಮಿಕೊಳ್ಳಲಾಗುತಿದೆ. ಸುಳ್ಯದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 407 ಅರ್ಜಿಗಳು ಬಂದಿತ್ತು. ಕಂದಾಯ,ಅರಣ್ಯ, ಗ್ರಾಮೀಣಾಭಿವೃದ್ಧಿ, ಅಕ್ರಮ ಸಕ್ರಮ, ಪ್ಲಾಟಿಂಗ್, ಗ್ರಾಮೀ಼ಣ ರಸ್ತೆಗಳ ಅಭಿವೃದ್ಧಿ, ಕೃಷಿಕರ ಸಮಸ್ಯೆ ಸೇರಿದಂತೆ ಹಲವು ಬೇಡಿಕೆಗಳು ಬಂದಿದೆ. ಇಲ್ಲಿನ ಸಮಸ್ಯೆ ಪರಿಹರಿಸಲು ಅನುದಾನಗಳ ಮಹಾಪೂರವೇ ಬೇಕಾಗಬಹುದು. ಸರಕಾರದಿಂದ ಸುಳ್ಯ ತಾಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಪ್ರಯತ್ನ ನಡೆಸುತ್ತೇನೆ ಎಂದು ಅವರು ಹೇಳಿದರು. ಅರಣ್ಯ, ಕಂದಾಯ ಭೂಮಿ ಸಮಸ್ಯೆ,ಪ್ಲಾಟಿಂಗ್ ಸಮಸ್ಯೆ, 1-ಟೂ 5 ಸಮಸ್ಯೆ ಪರಿಹಾರಕ್ಕೆ ಸರ್ವೆ ಮಾಡಬೇಕಾಗಿದೆ. ಇದಕ್ಕೆ ಪ್ರತ್ಯೇಕ ಸರ್ವೆ ತಂಡ ರಚನೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಸುಳ್ಯ ಸರಕಾರಿ ಆಸ್ಪತ್ತೆಯಲ್ಲಿ ಟೆಕ್ನಿಷಿಯನ್ಗಳ ಖಾಲಿ ಕುರಿತು ಪತ್ರಕರ್ತರು ಕೇಳಿದಾಗ ರಾಜ್ಯದಲ್ಲಿ 800 ಮಂದಿ ಟೆಕ್ನಿಷಿಯನ್ ಮತ್ತಿತರ ಸಿಬ್ಬಂದಿಗಳ ನೇಮಕಾತಿ ನಡೆಯಲಿದೆ. ಈ ಸಂದರ್ಭದಲ್ಲಿ ಸುಳ್ಯ ಆಸ್ಪತ್ರೆಗೂ ನೇಮಕ ಆಗಬಹುದು. ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ನೇಮಕಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸುಳ್ಯ ತಾಲೂಕಿಗೆ ಮತ್ತೆ ಆಗಮಿಸಿ ತಾಲೂಕಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಕಾಮಗಾರಿಗಳನ್ನು ವೀಕ್ಷಿಸುತ್ತೇನೆ ಎಂದ ಸಚಿವರು ಜನತಾದರ್ಶನದಲ್ಲಿ ಬಂದ ಎಲ್ಲಾ ಅರ್ಜಿಗಳನ್ನೂ ಕಾಲಮಿತಿಯಲ್ಲಿ ಇತ್ಯರ್ಥ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಸಚಿವರನ್ನು ಸನ್ಮಾನಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಮುಖಂಡರಾದ ಎಂ.ವೆಂಕಪ್ಪ ಗೌಡ, ಕೆ.ಇ.ರಾಧಾಕೃಷ್ಣ, ಸದಾನಂದ ಮಾವಜಿ, ಬೆಟ್ಟ ರಾಜಾರಾಮ್ ಭಟ್, ಬೆಟ್ಟ ಜಯರಾಮ್ ಭಟ್, ವಿಜಯಕುಮಾರ್ ಸೊರಕೆ, ಗೀತಾ ಕೋಲ್ಚಾರ್ ಮತ್ತಿತರರು ಉಪಸ್ಥಿತರಿದ್ದರು.











