ಮಂಗಳೂರು: ಕಡಲ್ಕೊರೆತ ಇರುವ ಪ್ರದೇಶದಲ್ಲಿ ತುರ್ತು ಕಾಮಗಾರಿ ಹಾಗೂ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕು. ಈ ಬಾರಿ ಮೀನುಗಾರರಿಗೆ ಡೀಸೆಲ್ ಸಹಾಯಧನ, ಸೀಮೆಎಣ್ಣೆ ದೊರಕಿಸಿಕೊಡಲು ಮುಂಚಿತವಾಗಿ ಅಧಿಕಾರಿಗಳು ಸಿದ್ದರಾಬೇಕು. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಯೋಜನೆಯೊಂದನ್ನು ರೂಪಿಸಬೇಕು ಎಂದು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ವೈದ್ಯ ಹೇಳಿದರು.
ಅವರು ಜೂ.16ರಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ
ಸಭಾಂಗಣದಲ್ಲಿ ಕಡಲ್ಕೊರೆತ ಸೇರಿದಂತೆ ಬಂದರು, ಮೀನುಗಾರಿಕೆ ಇಲಾಖೆ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿ ಇರುವ 1.60 ಕೋಟಿ ರೂ.ಗಳ ಪರಿಹಾರವನ್ನು ರಾಜ್ಯ ಸರ್ಕಾರದಿಂದ ನೀಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಕೇಂದ್ರ ಸರ್ಕಾರದಿಂದ ಮೀನುಗಾರರ ಸಂತ್ರಸ್ತ ಕುಟುಂಬಕ್ಕೆ ಬರಬೇಕಾದ ಪರಿಹಾರದ ಮೊತ್ತವನ್ನು ಪಾವತಿ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು. ಸಮುದ್ರ ತೀರದಲ್ಲಿ ಮೀನು ಬಲೆಯನ್ನು ನೇಯ್ಗೆ ಮಾಡುವವರಿಗೆ ಮಳೆ ಬಂದಾಗ ರಕ್ಷಣೆಗೆ ಶೆಡ್ ನಿರ್ಮಾಣ ಮಾಡಬೇಕು. ಮೀನು ಮಾರಾಟ ಮಾಡುವ ಮಹಿಳೆಯರಿಗೆ ಶೆಡ್ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಮಾತನಾಡಿ, ಸಚಿವರು ನೀಡಿದ ಸಲಹೆಯಂತೆ ಕೂಡಲೇ ಈ ಬಗ್ಗೆ ಕ್ರಮಕ್ಕೆ ಮುಂದಾಗಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಡಿಎಫ್ ಒ ದಿನೇಶ್ ಕುಮಾರ್, ಬಂದರು ಅಧಿಕಾರಿ ಸ್ವಾಮಿ, ರಾಠೋಡ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.