ಸುಳ್ಯ:ಸುಳ್ಯ ಆಡಳಿತದ ಕೇಂದ್ರವಾದ ಸುಳ್ಯ ಮಿನಿವಿಧಾನ ಸೌಧ ಸೋರುತ್ತಿದ್ದು ಭೂಮಾಪನ ಇಲಾಖಾ ಕಚೇರಿ ತುಂಬಾ ನೀರು ತುಂಬಿದೆ.ಮಿನಿ ವಿಧಾನಸೌಧದ ಎರಡನೇ ಮಹಡಿಯಲ್ಲಿ ಹಲವು ಕಡೆಗಳಲ್ಲಿ ನೀರು ಸೋರುತ್ತಿದ್ದು ಕಚೇರಿ ಒಳಗಡೆ ಪೂರ್ತಿ ನೀರು ಹರಿಯುತಿದೆ. ಹಲವು ಸಮಯದಿಂದ ಮಳೆ ಬಂದರೆ ನೀರೆಲ್ಲಾ

ಒಳ ಸೇರುತ್ತಿದ್ದು ಸರ್ವೆ ಇಲಾಖೆಯ ಕಚೇರಿ ನೀರಿನಲ್ಲಿ ತೇಲುತಿದೆ. ಕಿಡಕಿ, ಸನ್ಸೈಡ್ ಬದಿ ಸೇರಿದಂತೆ ಹಲವು ಕಡೆ ನೀರು ಸುರಿಯುತಿದೆ. ಇದರಿಂದ ಕಚೇರಿಯಲ್ಲಿ ನೀರು ತುಂಬಿದ್ದು ಕಚೇರಿ ನಿರ್ವಹಣೆಗೆ ತೀವ್ರ ಅಡಚಣೆ ಉಂಟಾಗಿದೆ. ಸೋರುವುದರಿಂದ ನೀರಿನಲ್ಲಿ ಕಚೇರಿಯ ಕಡತಗಳು ನಾಶವಾಗುವ ಭೀತಿ ಕಾಡಿದೆ. ಸರ್ವೆ ಇಲಾಖೆಯ ಕಚೇರಿಯಲ್ಲಿರುವ ಶೌಚಾಲಯದಲ್ಲಿಯೂ ನೀರು ಸೋರುತ್ತಿದೆ.ಶೌಚಾಲಯದಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದ್ದು ದುರ್ವಾಸನೆ ಬೀರುತಿದೆ.

ಶಾಸಕಿ ಭಾಗೀರಥಿ ಮುರುಳ್ಯ ಭೇಟಿ-ಪರಿಶೀಲನೆ:
ಮಿನಿ ವಿಧಾನ ಸೌಧ ಕಟ್ಟಡ ಸೋರಿ ನೀರೆಲ್ಲಾ ಸರ್ವೆ ಇಲಾಖೆಯ ಕಚೇರಿ ಸೇರಿರುವುದನ್ನು ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪರಮೇಶ್ವರ್ ಅವರನ್ನು ಕರೆಸಿ ಚರ್ಚೆ ನಡೆಸಿದರು. ಸೋರುವುದನ್ನು ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು. ತಾಲೂಕು ಕಚೇರಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಅಗತ್ಯ ಕ್ರಮ

ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಿ ಕ್ರಮ ಕೈಗೊಳ್ಳಲು ಶಾಸಕರು ಸೂಚಿಸಿದರು.ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ಶ್ರೀನಾಥ್ ಬಾಳಿಲ, ಮಹೇಶ್ ರೈ ಮೇನಾಲ,ಚಂದ್ರಶೇಖರ ಪನ್ನೆ, ಮನುದೇವ್ ಪರಮಲೆ, ಮಾಧವ ಚಾಂತಾಳ ಮತ್ತಿತರರು ಶಾಸಕರ ಜೊತೆಯಲ್ಲಿದ್ದರು.