ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ರೂಪುಗೊಂಡಿದ್ದು ತಮಿಳುನಾಡಿನಲ್ಲಿ ಅಬ್ಬರದ ಮಳೆಯಾಗುತ್ತಿದೆ.ಚೆನ್ನೈ ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಮಿಚಾಂಗ್ ಚಂಡಮಾರುತದಿಂದಾಗಿ ಡಿ.5ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಳೆಯಿಂದಾಗಿ

ವಿಮಾನ ಹಾರಾಟ ಸ್ಥಗಿತಗೊಂಡಿದೆ.
ಚೆನ್ನೈ, ತಿರುವಲ್ಲೂರು, ಚೆಂಗಲ್ಪಟ್ಟು, ಕಾಂಚೀಪುರಂನಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೀಚ್ಗಳಿಗೆ ಭೇಟಿ ನೀಡದಂತೆಯೂ ಸೂಚನೆ ನೀಡಲಾಗಿದೆ. ವಿಮಾನ ಅಷ್ಟೇ ಅಲ್ಲದೆ ಹಲವು ರೈಲುಗಳ ಸಂಚಾರವನ್ನೂ ರದ್ದು ಮಾಡಲಾಗಿದೆ. ಮಿಚಾಂಗ್ ಚಂಡಮಾರುತ ಪ್ರಭಾವದಿಂದ ಕರ್ನಾಟಕ ರಾಜ್ಯದ ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಎರಡು ದಿನ ರಾಜ್ಯದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕೆಲವೆಡೆ ತುಂತುರು ಮಳೆಯಾಗಿದೆ.












