ನವದೆಹಲಿ:ಭಾನುವಾರ ನಡೆದ ಐಪಿಎಲ್ನ ರಣ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 12 ರನ್ಗಳ ರೋಚಕ ಗೆಲುವು ದಾಖಲಿಸಿದೆ.ಕರುಣ್ ನಾಯರ್ ನೆಡೆಸಿದ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಸುಲಭ ಜಯದತ್ತ ಮುನ್ಮುಗ್ಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕರಾರುವಕ್ಕಾದ ಬೌಲಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಮೂಲಕ ಮುಂಬೈ ಕಟ್ಟಿ ಹಾಕಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ
20 ಓವರ್ಗಳಲ್ಲಿ 5 ವಿಕೆಟ್ಗೆ 205 ರನ್ಗಳ ಸವಾಲಿನ ಮೊತ್ತ ಕಲೆ ಹಾಕಿತು.ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ಗಳಲ್ಲಿ 193 ರನ್ಗೆ ಆಲ್ ಔಟ್ ಅಯಿತು. ಡೆಲ್ಲಿ ಪರ ಕರುಣ್ ನಾಯರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 40 ಎಸೆತಗಳಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 89 ರನ್ ಸಿಡಿಸಿದರು. ಸಿಕ್ಸರ್, ಬೌಂಡರಿ ಸುರಿಮಳೆಗೈದ ಕರುಣ್ ನಾಯರ್ ಮುಂಬೈ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಅಭಿಷೇಕ್ ಪೋರೆಲ್ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ಡೆಲ್ಲಿಯ ಮಧ್ಯಮ ಕ್ರಮಾಂಕ ಕುಸಿಯಿತು. 10.1 ಓವರ್ನಲ್ಲಿ 119ಕ್ಕೆ ಒಂದು ವಿಕೆಟ್ ಇದ್ದು ಸುಲಭ ಜಯದೆಡೆಗೆ ಮುನ್ನುಗ್ಗುತ್ತಿದ್ದ ಡೆಲ್ಲಿಯ ವಿಕೆಟ್ಗಳು ನಿರಂತರ ಉರುಳಿತು.
ಜಸ್ಪ್ರೀತ್ ಬುಮ್ರಾ, ಕರಣ್ ಶರ್ಮ ನೇತೃತ್ವದ ಮುಂಬೈ ಬೌಲರ್ಗಳು ಬಿಗು ದಾಳಿ ಸಂಘಟಿಸಿ ಡೆಲ್ಲಿ ಬ್ಯಾಟರ್ಗಳನ್ನು ಕಟ್ಟಿ ಹಾಕಿದರು. 3 ರನ್ ಔಟ್ ಮಾಡುವ ಮೂಲಕ ಫೀಲ್ಡರ್ಗಳು ಕೈಚಳಕ ತೋರಿದರು. ಕೊನೆಯಲ್ಲಿ ಡೆಲ್ಲಿ 193 ರನ್ಗೆ ಆಲ್ ಔಟ್ ಆಗಿ ಸೋಲೊಪ್ಪಿಕೊಂಡಿತು. ಕರುಣ್ ಶರ್ಮ, ಮಿಚೆಲ್ ಸ್ಯಾಂಟ್ನರ್ 2, ಬುಮ್ರಾ, ದೀಪಕ್ ಚಾಹರ್ ತಲಾ 1 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಮುಂಬೈ ಪರ ರಿಯಾನ್ ರಿಕ್ಕೆಲ್ಟನ್, ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಉತ್ತಮ ಪ್ರದರ್ಶನ ನೀಡಿದರು. ರಿಯಾನ್ ಹಾಗೂ ಸೂರ್ಯ ಕ್ರಮವಾಗಿ 41 ರನ್ (25 ಎಸೆತ), 40 ರನ್ (28 ಎಸೆತ) ಗಳಿಸಿದರೆ, ತಿಲಕ್ ವರ್ಮಾ 33 ಎಸೆತಗಳಲ್ಲಿ 59 ರನ್ ಬಾರಿಸಿದರು. ಕೊನೆಯಲ್ಲಿ ಅಬ್ಬರಿಸಿದ ನಮನ್ ದಿರ್ 17 ಎಸೆತಗಳಲ್ಲಿ 38 ರನ್ ಬಾರಿಸಿದರು. ಹೀಗಾಗಿ, ತಂಡದ ಮೊತ್ತ ಇನ್ನೂರರ ಗಡಿ ದಾಟಿತು.
ಆಡಿದ 4 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಮುನ್ನುಗ್ಗುತ್ತಿದ್ದ ಡೆಲ್ಲಿ 5 ನೇ ಪಂದ್ಯದಲ್ಲಿ ಮುಗ್ಗರಿಸಿತು. ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವು ಮತ್ತೆ ಉತ್ಸಾಹ ಮೂಡಿಸಿತು