ಸುಳ್ಯ:ಸುಳ್ಯದಲ್ಲಿ ಉಂಟಾಗುತ್ತಿರುವ ನಿರಂತರ ವಿದ್ಯುತ್ ಕಡಿತದ ಹಿನ್ನಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಸುಳ್ಯ ಮೆಸ್ಕಾಂ ಇಂಜಿನಿಯರ್ಗಳನ್ನು ಕರೆಸಿ ಚರ್ಚೆ ನಡೆಸಿದರು. ಸುಳ್ಯದಲ್ಲಿ ಒಂದು ಮಳೆ ಬಂದೊಡನೆ ವಿದ್ಯುತ್ ಕಡಿತ ಆಗುತ್ತದೆ, ಅಲ್ಲದೆ ನಿರಂತರ ವಿದ್ಯುತ್ ಕಡಿತ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ನಿರಂತರ ದೂರು ಬರುತ್ತಿದೆ. ಆದುದದರಿಂದ ಸುಳ್ಯದಲ್ಲಿ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಗೆ
ಪರಿಹಾರ ಆಗಬೇಕು ಎಂದು ಶಾಸಕರು ಇಂಜಿನಿಯರ್ಗಳಿಗೆ ಸೂಚಿಸಿದರು. ಮಾಡಾವು ಸುಳ್ಯ 33 ಕೆವಿ ವಿದ್ಯುತ್ ಲೈನ್ನಲ್ಲಿ ಮರ ಬಿದ್ದು ಮತ್ತಿತರ ಕಾರಣಗಳಿಂದ ವಿದ್ಯುತ್ ಕಡಿತ ಆಗುತ್ತಿದೆ. ಬೆಳ್ಳಾರೆ- ಸುಳ್ಯ ಭೂಗರ್ಭ ಕೇಬಲ್ ಮೂಲಕ ನಿರ್ಮಾಣ ಆಗುವ 33 ಕೆವಿ ಲೈನ್ ಕಾಮಗಾರಿ ಪೂರ್ತಿಗೊಂಡರೆ ಸುಳ್ಯದ ವಿದ್ಯುತ್ ಕಡಿತ ಸಮಸ್ಯೆ ಪರಿಹಾರ ಆಗಲಿದೆ. ಮಾಡಾವು ಸುಳ್ಯ ಲೈನ್ ಕಡಿತಗೊಂಡರೆ ಪರ್ಯಾಯವಾಗಿ
ಬೆಳ್ಳಾರೆ-ಸುಳ್ಯ ಲೈನ್ನ ಮೂಲಕ ವಿದ್ಯುತ್ ಸರಬರಾಜು ಮಾಡಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದರು. ಹಾಗಾದರೆ ಈ ಕಾಮಗಾರಿಯನ್ನು ಕೂಡಲೇ ಪೂರ್ತಿ ಮಾಡಲು ಶಾಸಕರು ಸೂಚನೆ ನೀಡಿದರು. ಕಾಮಗಾರಿ ಆರಂಭಗೊಂಡಿದ್ದು 30 ರಿಂದ 45 ದಿನಗಳ ಒಳಗಾಗಿ ಪೂರ್ತಿ ಮಾಡಲಾಗುವುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದರು.
16 ಕೋಟಿಯ ಯೋಜನೆ:
ಬೆಳ್ಳಾರೆ-ಸುಳ್ಯ 33 ಕೆವಿ ಲೈನ್ 16 ಕೋಟಿಯ ಯೋಜನೆಯಾಗಿದ್ದು ಕಾಮಗಾರಿ ಆರಂಭಗೊಂಡಿದೆ. ಬೆಳ್ಳಾರೆ-ಕಳಂಜ-ಅಜ್ಜನಗದ್ದೆ- ಬೇಂಗಮಲೆ ಮೂಲಕ ಸೋಣಂಗೇರಿ ತನಕ ಭೂಗರ್ಭ ಕೇಬಲ್ ಮೂಲಕ ಲೈನ್ ಹಾದು ಬರಲಿದೆ. ಸೋಣಂಗೇರಿಯಿಂದ ಪೈಚಾರ್ ತನಕ ಸುಮಾರ್ 30 ಕಂಬ ಅಳವಡಿಸಿ ಲೈನ್ ಹಾದು ಬರಲಿದೆ. ಪೈಚಾರ್ನಿಂದ ಮೆಸ್ಕಾಂ ಸಬ್ ಸ್ಟೇಷನ್ ತನಕ ಈಗಾಗಲೇ ಭೂಗರ್ಭ ಕೇಬಲ್ ಲೈನ್ ಇದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ಮಾಹಿತಿ ನೀಡಿದರು. ಒಟ್ಟಿನಲ್ಲಿ ವಿದ್ಯುತ್ ಸಮಸ್ಯೆ ಶೀಘ್ರ ಪರಿಹಾರ ಆಗಬೇಕು ವಿದ್ಯುತ್ ಕಡಿತದ ಬಗ್ಗೆ ಜನರಿಂದ ದೂರು ಬರಬಾರದು ಎಂದು ಶಾಸಕರು ಹೇಳಿದರು.
ಸಭೆಯಲ್ಲೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್, ಸಹಾಯಕ ಇಂಜಿನಿಯರ್ ಸುಪ್ರೀತ್ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಲೋಕೋಪಯೋಗಿ ಎಇಇ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.