ಸುಳ್ಯ:ವಿದ್ಯುತ್ ಸಂಬಂಧಿತ ಸಂಬಂಧಿತ ಸಮಸ್ಯೆಗಳು ಬಂದರೆ ಸೂಕ್ತ ಸ್ಪಂದನೆ ಸಿಗದಿದ್ದರೆ ಮೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಹೇಳಿದ್ದಾರೆ.ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ವಿದ್ಯುತ್ ಕಡಿತ ಉಂಟಾದ ಸಂದರ್ಭದಲ್ಲಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು
ಗ್ರಾಹಕರು ದೂರಿದ ಸಂದರ್ಭದಲ್ಲಿ ಮೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡುವಂತೆ ಅವರು ಸೂಚಿಸಿದರು.ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಆದರೆ ಹಲವು ದಿನಗಳ ಕಾಲ ಸರಿಪಡಿಸುವುದಿಲ್ಲ, ದೂರು ನೀಡಿದರೆ ಸ್ಪಂದನೆ ಇಲ್ಲ ಎಂದು ಗ್ರಾಹಕರು ದೂರಿದರು. ವಿದ್ಯುತ್ ಸಮಸ್ಯೆ ಉಂಟಾದರೆ ಮೆಸ್ಕಾಂ ಸಹಾಯವಾಣಿಗೆ ದೂರು ಸಲ್ಲಿಸುವಂತೆ ಅಧೀಕ್ಷಕ ಇಂಜಿನಿಯರ್ ಹೇಳಿದರು. ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆ,ವಿದ್ಯುತ್ ಕಡಿತ, ಹೊಸ ಸಂಪರ್ಕ, 110 ಕೆವಿ ಸಬ್ ಸ್ಟೇಷನ್ ಹಾಗೂ ಲೈನ್ ಕಾಮಗಾರಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಧ್ಯಕ್ಷತೆಯಲ್ಲಿ ನಡೆದ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಸಭೆಯಲ್ಲಿ ವಿವಿಧ ಸಮಸ್ಯೆ ಕುಂದುಕೊರತೆಗಳ ಬಗ್ಗೆ ಗಮನಕ್ಕೆ ತಂದರು.
ಗ್ರಾಮೀಣ ಭಾಗದಲ್ಲಿ ಲೈನ್ಮೆನ್ಗಳ ಕೊರತೆ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು. ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಹೆಚ್ಚು ಲೈನ್ಮೆನ್ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಜಿನಿಯರ್ಗಳು ತಿಳಿಸಿದರು.ಸುಳ್ಯದ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ವಿಳಂಬ ಆಗಿರುವುದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಭಾಗಹಿಸಿದ ಹಲವರು 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ವಿಳಂಬ ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 110 ಕೆ.ವಿ.ಸಬ್ ಸ್ಟೇಷನ್ ಆಗದಿದ್ದರೆ ನಾವು ಸುಮ್ಮನೆ ಕುಳಿತುಕೊಳ್ಳವುದಿಲ್ಲ ಎಂದು ಜಿ.ಕೆ.ಹಮೀದ್ ಮತ್ತಿತರರು ಹೇಳಿದರು. ಸುಳ್ಯ ಹಾಗೂ ಪುತ್ತೂರು ಶಾಸಕರುಗಳು ಕಾಮಗಾರಿ ಪೂರ್ತಿಗೆ ಆಸಕ್ತಿ ವಹಿಸಬೇಕು ಎಂದು ಅವರು ಒತ್ತಾಯಿಸಿದರು. ಸತ್ಯಕುಮಾರ್ ಆಡಿಂಜ, ನಂದರಾಜ ಸಂಕೇಶ, ಎಸ್.ಕೆ.ಹನೀಫ, ರಶೀದ್ ಜಟ್ಟಿಪಳ್ಳ ದಿನೇಶ್ ಸರಸ್ವತಿ ಮಹಲ್ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು.
110 ಕೆವಿ ಲೈನ್ನ ಒಟ್ಟು 89 ಟವರ್ ನಿರ್ಮಾಣ ಆಗಬೇಕಾಗಿದ್ದು ಸುಳ್ಯ ತಾಲೂಕಿನಲ್ಲಿ 40, ಪುತ್ತೂರಿನಲ್ಲಿ 39, ಕನಕಮಜಲು ಮೀಸಲು ಅರಣ್ಯದಲ್ಲಿ 10 ಟವರ್ ನಿರ್ಮಾಣ ಆಗಬೇಕಾಗಿದೆ. ಇದರಲ್ಲಿ ಒಟ್ಟು 10 ಟವರ್ನ ಫೌಂಡೇಶನ್ ಕೆಲಸ ಆಗಿದೆ. 5 ಟವರ್ ಫೌಂಡೇಷನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ತಿಳಿಸಿದರು.
ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಸಚಿನ್ , ಮೆಸ್ಕಾಂ ಸುಳ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್,ಸುಬ್ರಹ್ಮಣ್ಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಸಫಲ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮಿದ್ ಕುತ್ತಮೊಟ್ಟೆ , ಸೂಡ ಅಧ್ಯಕ್ಷ ಕೆ. ಎಂ.ಮುಸ್ತಫ, ರಾಧಾಕೃಷ್ಣ ಬೊಳ್ಳೂರು, ಶಾರೀಖ್, ರಾಧಾಕೃಷ್ಣ ಪರಿವಾರಕಾನ, ವಿನಯ ಬೆದ್ರುಪಣೆ, ಮುಸ್ತಫ ಅಂಜಿಕಾರ್, ಧರ್ಮಪಾಲ ಕೊಯಿಂಗಾಜೆ, ಚೇತನ್ ಕಜೆಗದ್ದೆ, ಭವಾನಿಶಂಕರ ಕಲ್ಮಡ್ಕ, ಶಂಕರ ಕಲ್ಮಡ್ಕ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಸಹಾಯಕ ಇಂಜಿನಿಯರ್ಗಳಾದ ಹರಿಕೃಷ್ಣ, ಸುಪ್ರೀತ್,ಚಿದಾನಂದ, ಮಹೇಶ್,ಲೋಕೇಶ್, ಉಷಾಕುಮಾರಿ, ಪರಶುರಾಮ ಮತ್ತಿತರರು ಉಪಸ್ಥಿತರಿದ್ದರು.












