ಸುಳ್ಯ:ಗ್ರಾಮ ದೈವ ಮೇನಾಲ ಉಳ್ಳಾಕುಲು ಮಾಡ ಚಾವಡಿ ಪರಿವಾರ ಮತ್ತು ನಾಗದೇವರು ಶ್ರೀ ಧರ್ಮರಸು ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ಮೇದಿನಡ್ಕದಲ್ಲಿ ನಡೆಯಿತು. ಮೇದಿನಡ್ಕದಲ್ಲಿ ನಾಗತಂಬಿಲ ಉಳ್ಳಾಕುಲು ದೇವಸ್ಥಾನದಲ್ಲಿ ಗಣಪತಿ ಹವನ ಶುದ್ದಿಕಲಶ ಮತ್ತು ದೈವಗಳಿಗೆ ತಂಬಿಲ ಸೇವೆ ನಡೆದು
ಮೇದಿನಡ್ಕ ದೈವ ನರ್ತನ ಸ್ಥಳದಲ್ಲಿ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆದು ಬಳಿಕ ಮೇನಾಲ ಉಳ್ಳಾಕುಲು ಚಾವಡಿಯಿಂದ ಭಂಡಾರ ತೆಗೆದು ದೈವರ ಮಂಟಪ, ರುದ್ರಚಾಮುಂಡಿ ಕಟ್ಟೆ ಉಳ್ಳಾಕುಲು ಮಾಡಕ್ಕೆ ತೆರಳಿ ಬಳಿಕ ಆಕರ್ಷಕ ಸಿಡ್ಡಿಮದ್ದಿನ ಪ್ರದರ್ಶನದೊಂದಿಗೆ ಕೊಡಿಯಡಿಗೆ ಆಗಮನವಾಯಿತು. ಬಳಿಕ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆಯಾಟವಾಗಿ ಸುಜೀತ ಸಂದೀಪ್ ರೈ ಮೇನಾಲ ಮತ್ತು ಡಾ.ದೀಪ ಆಶಿಕ್ ಶೆಟ್ಟಿ ಕಂಕಣಗುತ್ತು ಇವರಿಂದ ನಡೆಸಲ್ಪಟ್ಟಿತು. ಸೋಮವಾರ ಮುಂಜಾನೆ ಉಳ್ಳಾಕುಲು ದೈವದ ನೇಮೋತ್ಸವದ ಬಳಿಕ ಪ್ರಸಾದ ವಿತರಣೆ ನಡೆಯಿತು.ಬಳಿಕ ನಾಯರ್ ದೈವ ಮತ್ತು ಪುರುಷ ದೈವದ ನೇಮೋತ್ಸವ ನಡೆದು ಬಳಿಕ ರುದ್ರಚಾಮುಂಡಿ ವರ್ಣಾರ ಪಂಜುರ್ಲಿ ದೈವದ ನೇಮೋತ್ಸವ ನಡೆಯಿತು. ಸಂಜೆ ಭಂಡಾರ ಉಳ್ಳಾಕುಲು ದೈವಸ್ಥಾನಕ್ಕೆ ತರಲಾಯಿತು ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ದೈವದ ಅಭಯದ ನುಡಿಗಳೊಂದಿಗೆ ಪುನೀತರಾದರು.
ಇರ್ವೆರ್ ಉಳ್ಳಾಕುಲು ದೈವದ ನೃತ್ಯ ಆರಂಭಗೊಂಡು ಬಳಿಕ ಉಳ್ಳಾಕುಲು ದೈವದ ಮೇದಿನಡ್ಕ ಬಳಿಯ ಮಾಡಕ್ಕೆ ಸುಮಾರು 4 ಕಿಲೋ ಮೀಟರ್ ದೂರದವರೆಗೆ ಮುಂಜಾನೆಯ ವೇಳೆಯಲ್ಲಿ ತೆರಳುವ ದೈವದ ಸುಂದರ ದೃಶ್ಯವನ್ನು ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸಿ ಮಾಡ ಭೇಟಿ ಹಾಗೂ ಪರಿವಾರ ದೈವಗಳ ಕಟ್ಟೆ ಭೇಟಿಯನ್ನು ಕಣ್ತುಂಬಿಕೊಂಡರು. ಗುಡ್ಡಪ್ಪ ರೈ ಮೇನಾಲ ಹಾಗೂ ಹದಿನಾರು ಮನೆತನ ಮತ್ತು ಊರಿನ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ಉತ್ಸವ ಅದ್ದೂರಿಯಾಗಿ ನಡೆಯಿತು.





