ಅಜ್ಜಾವರ:ಶತಮಾನದ ಬಳಿಕ ನಡೆಯುವ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಮೇನಾಲ ಅಣಿಯಾಗಿದೆ.ಊರಿಗೇ ಊರೇ ಶೃಂಗಾರಗೊಂಡು ಭಕ್ತ ಸಮೂಹವನ್ನು ಕೈ ಮುಗಿದು ಕರೆಯುತಿದೆ..
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾರ್ಚ್ 5, 6 ಮತ್ತು 7ರಂದು ನಡೆಯಲಿದೆ.ಮಹೋತ್ಸವಕ್ಕೆ ಎಲ್ಲಾ
ಸಿದ್ಧತೆಗಳು ಪೂರ್ಣಗೊಂಡಿದೆ. ಮಾ.5ರಂದು ಪೂ.ಗಂಟೆ 8.30ರಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಅಜ್ಜಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಹಾಗೂ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪೂಜೆ ನಡೆಸಿ ಹಸಿರು ವಾಣಿ ಎರಡು ಕಡೆಯಿಂದ ವಾಹನ ಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ಆಗಮಿಸಲಿದೆ. ಪೂ.8.57ರಿಂದ 10ರ ಒಳಗೆ ಕಲವರ ನಿರಕ್ಕಲ್(ಉಗ್ರಾಣ ತುಂಬುವುದು) ನಡೆಯಲಿದೆ.ಸಂಜೆ ಗಂಟೆ 6.30ಕ್ಕೆ ಕೈವೀದ್ ನಡೆಯಲಿದೆ. ರಾತ್ರಿ 8.30ಕ್ಕೆ ದೈವಗಳ ಕೂಡುವಿಕೆ.
ಮಾ.6 ರಂದು
ಸಂಜೆ ಗಂಟೆ 4 ರಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ಸಂಜೆ ಗಂಟೆ 5.30 ರಿಂದ ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ,
ರಾತ್ರಿ ಗಂಟೆ 7.30 ರಿಂದ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ರಾತ್ರಿ ಗಂಟೆ 11.00 ರಿಂದ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್
ರಾತ್ರಿ ಗಂಟೆ 12.00 ರಿಂದ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ.
ಮಾ.7ರಂದು ಪೂ.ಗಂಟೆ 9ರಿಂದ ಶ್ರೀ ಕೋರಚ್ಚನ್ ದೈವ, ಪೂ. ಗಂಟೆ 11ರಿಂದ ಶ್ರೀ ಕಂಡನಾರ್ ಕೇಳನ್ ದೈವ ಅ.2ರಿಂದ ಶ್ರೀ ವಯನಾಟ್ ಕುಲವನ್ ದೈವ, ಅ 3.00ರಿಂದ ಶ್ರೀ ವಿಷ್ಣುಮೂರ್ತಿ ದೈವ ಹೊರಡಲಿದೆ.
ರಾತ್ರಿ ಗಂಟೆ 10.00ರಿಂದ ಮರಪಿಳರ್ಕಲ್, ರಾತ್ರಿ ಗಂಟೆ 11ಕ್ಕೆ ಕೈವೀದ್ ನಡೆಯಲಿದೆ.
ಅದ್ದೂರಿ ಸಿದ್ಧತೆ:
ದೈವಂಕಟ್ಟು ಮಹೋತ್ಡವಕ್ಕೆ ಅದ್ದೂರಿ ಸಿದ್ಧತೆ ಮಾಡಲಾಗಿದೆ.
ದೈವಸ್ಥಾನದ ಕೆಳಗಡೆಯ ಭಾಗ ಸಮತಟ್ಟು ಮಾಡಿ ದೈವಂಕಟ್ಟು ಮಹೋತ್ಸವ ನಡೆಯಲು ಬೇಕಾದ ಜಾಗವನ್ನು ವಿಸ್ತಾರಗೊಳಿಸಲಾಗಿದೆ. ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವುದರಿಂದ ಮಹೋತ್ಸವ ನಡೆಯುವ ಜಾಗದ ಸುತ್ತಲೂ ಜನರು ಕುಳಿತು ದೈವಂಕಟ್ಟು ಮಹೋತ್ಸವ ವೀಕ್ಷಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ನಿರಂತರ ಅನ್ನದಾನ ಸೇವೆ ನಡೆಯಲಿರುವುದರಿಂದ ಅದಕ್ಕೆ ಬೇಕಾದ ಜಾಗದ ವ್ಯವಸ್ಥೆಯನ್ನು ಮಾಡಲಾಗಿದೆ.ಕಾರ್ಯಕ್ರಮದ
ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚನೆ ಮಾಡಿಕೊಳ್ಳಲಾಗಿದ್ದು ಅಹೋರಾತ್ರಿ ದುಡಿಯುತ್ತಿದ್ದಾರೆ. ಎಲ್ಲೆಡೆ ತಳಿರು, ತೋರಣ, ಬಂಟಿಗ್ಸ್, ಫ್ಲೆಕ್ಸ್ ಅಳವಡಿಸಲಾಗಿದ್ದು ಊರಿಗೇ ಊರೇ ಶೃಂಗಾರಗೊಂಡಿದೆ. ಅಲ್ಲಲ್ಲಿ ದ್ವಾರಗಳು ನಿರ್ಮಾಣವಾಗಿದ್ದು ಭಕ್ತರನ್ನು ಸ್ವಾಗತಿಸುತಿದೆ.ಒಟ್ಟಿನಲ್ಲಿ ಭಕ್ತಿ ಸಂಭ್ರಮದ ಮಹಾ ಉತ್ಸವಕ್ಕೆ ಮೇನಾಲ ಅಣಿಯಾಗಿ ನಿಂತು.. ಭಕ್ತರನ್ನು ಕೈ ಬೀಸಿ ಕರೆಯುತಿದೆ.