ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಕಾಪಾಡುವ ಕುರಿತು ಚರ್ಚಿಸಲು ಗೃಹ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸೌಹಾರ್ದ ಸಭೆ ನಡೆಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಗಳ ವಿರುದ್ಧ ದ್ವೇಷ ಹಬ್ಬಿಸುವುದು, ಬೇರೆ ಧರ್ಮಗಳ ಅವಹೇಳನ, ಸುಳ್ಳು ಸುದ್ದಿ ಹರಡುವುದು, ದ್ವೇಷ ಭಾಷಣ, ಜಿಲ್ಲೆಯ ಸಾಮರಸ್ಯ ಕದಡುವ ಪ್ರತಿಯೊಂದು ನಡೆಯನ್ನೂ
ಮಟ್ಟ ಹಾಕಬೇಕು. ಡ್ರಗ್ಸ್, ಜೂಜು, ಮರಳು ದಂಧೆ ಮತ್ತಿತರ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು. ತಾರತಮ್ಯ ಮಾಡದೇ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ರಾಜಕೀಯ ಪಕ್ಷದವರು, ಶಿಕ್ಷಣ–ಧಾರ್ಮಿಕ ಸಂಘ ಸಂಸ್ಥೆಗಳು ಮತ್ತು ವಿವಿಧ ಸಮುದಾಯಗಳ ಮುಖಂಡರು ಜಿಲ್ಲೆಯಲ್ಲಿ ಶಾಂತಿ ಕಾಪಾಡುವ, ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ವ್ಯಕ್ತವಾದ ಸಲಹೆಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಭರವಸೆ ನೀಡಿದರು.
ದ್ವೇಷ ಭಾಷಣ, ಗೋಹತ್ಯೆ ನಿಯಂತ್ರಣಕ್ಕೆ ಈಗಿರುವ ಕಾನೂನು ಬಳಸುತ್ತೇವೆ. ಸುಳ್ಳು ಸುದ್ದಿ ಹರಡುವಿಕೆ ತಡೆಯಲು ಮುಂದಿನ ಅಧಿವೇಶನದಲ್ಲೇ ಹೊಸ ಮಸೂದೆ ಮಂಡಿಸುತ್ತೇವೆ‘ ಎಂದು ತಿಳಿಸಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗಿರಥಿ ಮುರುಳ್ಯ, ಅಶೋಕ್ ಕುಮಾರ್ ರೈ, ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ವಿನಾಯಕ್ ನರವಾಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಭಾಗವಹಿಸಿದ್ದರು.





