ಪುತ್ತೂರು: ನಮ್ಮ ಆಹಾರ ಪದ್ದತಿ, ಜೀವನ ಶೈಲಿ ಮತ್ತು ಸ್ವಚ್ಚತೆಯ ಮೂಲಕ ರೋಗ ಬಾರದಂತೆ ತಡೆಯಲು ಸಾಧ್ಯವಿದೆ.ಆಸ್ಪತ್ರೆಯು ಚಿಕಿತ್ಸೆಯೊಂದಿಗೆ ಆರೋಗ್ಯದ ಕುರಿತು ಜನಜಾಗೃತಿ ಮೂಡಿಸುವ ಕೇಂದ್ರವಾಗಬೇಕು. ಸ್ವಚ್ಚ ಸಮಾಜ ನಿರ್ಮಾಣಕ್ಕಾಗಿ ಆಸ್ಪತ್ರೆಯ ಮೂಲಕ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ವಿಧಾನಸಭಾ ಸ್ವೀಕರ್ ಯು.ಟಿ. ಖಾದರ್ ಹೇಳಿದರು.ಅವರು ಭಾನುವಾರ ಪುತ್ತೂರು ಸಮೀಪದ
ಸಂಪ್ಯ ಕಮ್ಮಾಡಿಯಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಜಂಜಾಟದ ಬದುಕಿನಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ರಕ್ಷಣೆಗೂ ಒಂದಷ್ಟು ಸಮಯ ನೀಡಬೇಕಾದ ಅಗತ್ಯವಿದೆ. ಅಧಿಕಾರ, ಆಸ್ತಿ, ಅಂತಸ್ತಿಗಿಂತಲೂ ನಮಗೆ ಆರೋಗ್ಯ ಮುಖ್ಯವಾಗಿದೆ. ಅನಾರೋಗ್ಯ ಬರುವುದು ಸಹಜ. ಅಂತಹ ಸಂದರ್ಭದಲ್ಲಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ಮೆಡ್ಲ್ಯಾಂಡ್ ಆಸ್ಪತ್ರೆಯು ಆಶ್ರಯ ಕೇಂದ್ರವಾಗಲಿ ಎಂದರು.

ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಉದ್ಘಾಟಿಸಿದ ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ ನಾವು ಉಸಿರಾಡುತ್ತಿರುವ ಗಾಳಿಗೆ, ನಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತಕ್ಕೆ ವ್ಯತ್ಯಾಸವಿಲ್ಲ. ಜಗತ್ತನ್ನೇ ನಿಯಂತ್ರಿಸುವ ಸೂರ್ಯನಿಗಿಂತ ದೊಡ್ಡ ದೇವರಿಲ್ಲ. ಹಾಗೆಯೇ ಎಲ್ಲರನ್ನೂ ಸಮಾನರಾಗಿ ಕಂಡು ಸೇವೆ ನೀಡುವ ವೈದ್ಯಕೀಯ ಕ್ಷೇತ್ರ ಅತ್ಯಂತ ಪವಿತ್ರವಾಗಿದೆ. ಒಳ್ಳೆಯ ಕೆಲಸಕ್ಕೆ ಎಲ್ಲರೂ ಸಹಕಾರ ನೀಡುವ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಆರೋಗ್ಯ ಕ್ಷೇತ್ರ ಆಧುನೀಕರಣಗೊಂಡು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದರೆ ಇಲ್ಲಿ ಬಡವರ ಬಗ್ಗೆ ಕಾಳಜಿ ಮತ್ತು ಉತ್ತಮ ಸೇವೆ ಮುಖ್ಯವಾಗಬೇಕು. ಇಲಿ ಸಪರ್ಮಕ ವ್ಯವಸ್ಥೆಗಳ ಕೊರತೆಯ ಕಾರಣದಿಂದಾಗಿ ರೋಗಿಗಳನ್ನು ಮಂಗಳೂರಿಗೆ ಕಳುಹಿಸಬೇಕಾಗುತ್ತದೆ. ಇಂಹ ಸಂದರ್ಭದಲ್ಲಿ ಹಲವು ಜೀವಹಾನಿ ಪ್ರಕರಣಗಳು ನಡೆಯುತ್ತದೆ. ಈ ಕಾರಣದಿಂದಲೇ ಪುತ್ತೂರಿಗೆ ಎಲ್ಲಾ ವ್ಯವಸ್ಥೆಗಳ ಮೆಡಿಕಲ್ ಕಾಲೇಜಿಗಾಗಿ ಗರಿಷ್ಠ ಆದ್ಯತೆಯ ಪ್ರಯತ್ನ ನಡೆಸಲಾಗಿದೆ. ಖಾಸಗಿಯಾಗಿಯೂ ಪುತ್ತೂರಿನ ವೈದ್ಯಕೀಯ ವ್ಯವಸ್ಥೆಗಳು ಬಲಯುತವಾಗಲಿ ಎಂದು ಹೇಳಿದರು.

ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ಮೆನ್ ಡಾ. ಆಶ್ರಫ್ ಕಮ್ಮಾಡಿ ಆಸ್ಪತ್ರೆಗೆ ಸರ್ವರ ಸಹಕಾರ ಕೋರಿದರು.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸ್ಕೈ ಹಾಸ್ಪಿಟಲ್ ಗ್ರೂಪ್ ಕಣ್ಣೂರು ಇದರ ಚೇರ್ಮನ್ ಡಾ. ವಸುದೇವನ್ ಟಿ.ಪಿ., ಬೆಂಗಳೂರು ಮಿಲನ್ ಪೈವುಡ್ ಸಪ್ಲ್ಯರ್ಸ್ನ ಮಿಲಪ್ ಚಂದ್ ಜೈನ್, ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಗೀತಾ ಮಾತನಾಡಿದರು.
ವೇದಿಕೆಯಲ್ಲಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಅಶ್ಮೀರ್ ಕಮ್ಮಾಡಿ, ನಿರ್ದೇಶಕ ಅಶೀಶ್ ಕಮ್ಮಾಡಿ, ವೈದ್ಯರಾದ ಡಾ. ಸ್ವಾತಿ, ಡಾ. ಅನೀಶ್ ಅಬ್ದುಲ್ಲಾ, ಅಬ್ದುಲ್ ಆಝೀಝ್, ಮೆಡಿಕಲ್ ಡೈರೆಕ್ಟರ್ ಅದ್ರಾಮ ಮತ್ತಿತರರು ಉಪಸ್ಥಿತರಿದ್ದರು.
ಆಸ್ಪತ್ರೆಯ ಕಾನೂನು ಸಲಹೆಗಾರ ಮೂಸ ಕುಂಞಿ ಪೈಂಬಚ್ಚಾಲ್ ಸ್ವಾಗತಿಸಿ, ಎಚ್.ಆರ್. ವಿಭಾಗದ ಅನುಶ್ರೀ ವಂದಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ರಝಾಕ್ ಸಾಲ್ಮರ ಕಾರ್ಯಕ್ರಮ ನಿರ್ವಹಿಸಿದರು.





