
ಸುಳ್ಯ: ಮಂಡ್ಯ ಹಾಗು ಮೈಸೂರಿನಲ್ಲಿ ಕಲಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಗುರುದೇವ ಲಲಿತಕಲಾ ಅಕಾಡೆಮಿಯ ವತಿಯಿಂದ ರಾಷ್ಟ್ರೀಯ ಮಟ್ಟದ ನೃತ್ಯೋತ್ಸವ ಹಾಗು ಚಿತ್ರ ಕಲಾ ಪ್ರದರ್ಶನ ‘ಮೇದಿನಿ ಉತ್ಸವ’ ನ.26 ಮತ್ತು 27 ರಂದು ಸುಳ್ಯ ತಾಲೂಕಿನ ಕನಕಮಜಲಿನ ‘ಕನಕ ಕಲಾ ಗ್ರಾಮ’ದಲ್ಲಿ ನಡೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳ ಜಾಗೃತಿ ಮೂಡಿಸುವ ಉದ್ದೇಶದಿಂದ ಮೂರ್ಜೆ ಶ್ರೀ ಮುತ್ತಣ್ಣ ಗೌಡ ಮತ್ತು ಶ್ರೀಮತಿ ನಳಿನಿ ಮುತ್ತಣ್ಣ ಗೌಡ ಅವರ ಸ್ಮರಣಾರ್ಥ ಎರಡು ದಿನಗಳ ಅದ್ದೂರಿ ಕಲಾ ಸಂಭ್ರಮ
‘ಮೇದಿನಿ ಉತ್ಸವ” ಆಯೋಜಿಸಲಾಗಿದೆ. ನ.26 ರಂದು ಸಂಜೆ 6 ಕ್ಕೆ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಉತ್ಸವವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಗುಣವತಿ ಕೊಲ್ಲಂತ್ತಡ್ಕ, ಪುತ್ತೂರಿನ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀದರ ಕುತ್ಯಾಳ ಭಾಗವಹಿಸಲಿದ್ದಾರೆ. ಮೂರ್ಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಮೂರ್ಜೆ ಅಧ್ಯಕ್ಷತೆ ವಹಿಸುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ- ಶಾಸ್ತ್ರೀಯ ನೃತ್ಯ ಕಲಾ

ಪ್ರಕಾರಗಳು ನಡೆಯಲಿದೆ. ನ.27ರಂದು ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ, ಶ್ರೀ ಗಣೇಶ್ ಗೋಡಂಬಿ ಇಂಡಸ್ಟ್ರೀಸ್‌ನ ಪದ್ಮಾವತಿ ಉಪೇಂದ್ರ ಕಾಮತ್, ಅಂಕಣಕಾರರು ಹಾಗು ಜೇನುಕೃಷಿ ತಜ್ಞ ಕುಮಾರ್ ಪೆರ್ನಾಜೆ,ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ನೆಡಿಲು, ಕನಕಮಜಲು ಸ್ವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಸುಶೀಲ ಭಾಗವಹಿಸಲಿದ್ದಾರೆ. ಗುರುದೇವ ಲಲಿತಕಲಾ ಅಕಾಡೆಮಿಯ ಕಲಾ ನಿರ್ದೇಶಕರಾದ ಡಾ.ಚೇತನಾ ರಾಧಾಕೃಷ್ಣ ಪಿ.ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ದಾಮೋದರ ಕಣಜಾಲು ಕಾರ್ಯಕ್ರಮ

ನಿರೂಪಿಸುವರು.ಕನಕಮಜಲು ಯುವಕ ಮಂಡಲ, ಸ್ವರ್ಣ ಮಹಿಳಾ ಮಂಡಲ ಕನಕಮಜಲು ಸಹಕಾರದಲ್ಲಿ ಎರಡು ದಿನಗಳ ಅದ್ದೂರಿ ಶಾಸ್ತ್ರೀಯ ನೃತ್ಯೋತ್ಸವ ನಡೆಯಲಿದೆ ಎಂದು ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಪಿ.ಎಂ. ಹಾಗು
ಕಲಾ ನಿರ್ದೇಶಕರಾದ ಡಾ.ಚೇತನಾ ರಾಧಾಕೃಷ್ಣ ಪಿ.ಎಂ ತಿಳಿಸಿದ್ದಾರೆ.