ಸುಳ್ಯ: ಮಂಡ್ಯ ಹಾಗೂ ಮೈಸೂರಿನಲ್ಲಿ ಶಾಸ್ತ್ರೀಯ ನೃತ್ಯ ಕಲಾ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗುರುದೇವ ಲಲಿತ ಕಲಾ ಅಕಾಡೆಮಿಯ ವತಿಯಿಂದ ಎರಡನೇ ವರ್ಷದ ರಾಷ್ಟ್ರೀಯ ನೃತ್ಯೋತ್ಸವ ‘ಮೇದಿನಿ ಉತ್ಸವ’ ಕನಕಮಜಲಿನ ಗುರುದೇವ್ ಕನಕ ಕಲಾ ಗ್ರಾಮದಲ್ಲಿ ನ.25ರಂದು ನಡೆಯಲಿದೆ. ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳ
ಜಾಗೃತಿಗಾಗಿ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ಭಾಗವಹಿಸುವ ರಾಷ್ಟ್ರೀಯ ನೃತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮೂರ್ಜೆ ಶ್ರೀ ಮುತ್ತಣ್ಣ ಹಾಗೂ ಶ್ರೀಮತಿ ನಳಿನಿ ಮುತ್ತಣ್ಣ ನೆನಪಿನಲ್ಲಿ ‘ಮೇದಿನಿ ಉತ್ಸವ’ ಸಂಘಟಿಸಲಾಗುತಿದೆ. ಕಳೆದ ವರ್ಷ ಎರಡು ದಿನಗಳ ಕಾಲ ಖ್ಯಾತ ಕಲಾವಿದರು ಭಾಗವಹಿಸಿದ್ದ ನೃತ್ಯೋತ್ಸವ ನಡೆದಿತ್ತು. ನ.25ರಂದು ನಡೆಯುವ ನೃತ್ಯೋತ್ಸವದಲ್ಲಿ ಖ್ಯಾತ ಕಲಾವಿದರು ಭಾಗವಹಿಸಿ ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ನೃತ್ಯ ಕಲೆಗಳ ರಸದೌತಣ ನೀಡಲಿದ್ದಾರೆ ಎಂದು ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಪಿ.ಎಂ.ಹಾಗೂ ಕಲಾ ನಿರ್ದೇಶಕರಾದ ಡಾ.ಚೇತನಾ ರಾಧಾಕೃಷ್ಣ ಪಿ.ಎಂ.ತಿಳಿಸಿದ್ದಾರೆ.









