*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಊಟ ತಯಾರಿದೆ.. ದರ ಕೇವಲ 10 ರೂ.. ದರ ಕೇಳಿ ಹೋಟೆಲ್ ಎಂದು ಮತ್ತೆಲ್ಲಿಗೋ ತಪ್ಪಿ ಬಂದಿದ್ದೇವೆ ಎಂದು ಭಾವಿಸಬೇಡಿ.. 10 ರೂಪಾಯಿಯ ಊಟ ಅಲ್ವಾ ಕೇವಲ ಗಂಜಿ..ಚಟ್ನಿ ನೀಡುತ್ತಾರೋ ಎಂಬ ಅನುಮಾನವೂ ಬೇಡ.. ಬಿಸಿ ಬಿಸಿ ಅನ್ನ.. ಸಾಂಬಾರ್,
ಪಲ್ಯ, ಉಪ್ಪಿನಕಾಯಿ, ಮಜ್ಜಿಗೆ.. ಹೀಗೆ ಪ್ಲೇಟ್ ಪೂರ್ತಿ ತುಂಬಿದ ಖಾದ್ಯಗಳು ಒಳಗೊಂಡ ಸ್ವಾದಿಷ್ಟ ಊಟ..! ಹೀಗೊ ಒಂದು ಹೋಟೆಲ್ ಇದೆಯಾ.. ಅದು ಈ ಕಾಲದಲ್ಲಿ..? ಹೌದು. ಇಲ್ಲಿ ಸುಳ್ಯದಲ್ಲಿದೆ. ಸುಳ್ಯದ
ಶ್ರೀರಾಂಪೇಟೆಯ ರಾಘವೇಂದ್ರ ಸರಳಾಯ ಅವರ ಹೊಟೇಲ್ ರಾಮ್ ಪ್ರಸಾದ್. ಕಾಲವನ್ನೂ ಮೀರಿದ ಅನ್ನದಾನ ಸೇವೆ ಇಲ್ಲಿ ನಡೆಯುತಿದೆ.
ರಾಮ್ ಪ್ರಸಾದ್ ಹೋಟೆಲ್ನಲ್ಲಿ ಪ್ರತಿದಿನ 10 ರೂ.ಗೆ ಹೊಟ್ಟೆ ತುಂಬಾ ಊಟ ಬಡಿಸುತ್ತಾರೆ.. ಆಶ್ಚರ್ಯ ಎನಿಸಿದರೂ ಇದು ಸತ್ಯ. ಎರಡನೇ ಬಾರಿಯ ಅನ್ನ, ಸಾಂಬಾರ್, ಪಲ್ಯ ಸೇರಿ 10 ರೂಗೆ ಹೊಟ್ಟೆ ತುಂಬಾ ಊಟ ನೀಡುತ್ತಾರೆ ಇಲ್ಲಿ. ಕಳೆದ 86 ವರ್ಷಗಳಿಂದ ಈ ರೀತಿ ಕಡಿಮೆ ದರದಲ್ಲಿ ಊಟವನ್ನು ನೀಡುವ ಹೆಗ್ಗಳಿಕೆ ಈ ಹೋಟೆಲ್ನದ್ದು.
ಹೋಟೆಲ್ ರಾಮ್ಪ್ರಸಾದ್ನಲ್ಲಿ ಊಟ ಸವಿಯುತ್ತಿರುವವರು
ಜನರಿಗೆ ಕಡಿಮೆ ದರದಲ್ಲಿ ಆಹಾರ ನೀಡಬೇಕು ಎಂದು ಕರ್ನಾಟಕ ಸರ್ಕಾರ ಕೆಲವು ವರ್ಷಗಳ ಹಿಂದೆಯಷ್ಟೇ ಇಂದಿರಾ ಕ್ಯಾಂಟೀನ್ ಆರಂಭಿಸಿತು. ಆದರೆ ಸರಳಾಯ ಕುಟುಂಬದವರು ಹೋಟೆಲ್ ರಾಮಪ್ರಸಾದ್ನಲ್ಲಿ ಮೂರು ತಲೆಮಾರಿನಿಂದ ಹೀಗೆ ಅನ್ನದಾನ ಮಾಡುತ್ತಾರೆ. ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದ ಪೆರುದಡಿಯ
ವೆಂಕಟ್ರಮಣ ಸರಳಾಯರು ಸುಳ್ಯದಲ್ಲಿ 86 ವರ್ಷಗಳ ಹಿಂದೆ
ಹೋಟೆಲ್ ಆರಂಭಿಸಿದರು, ಬಳಿಕ ಅವರ ಪುತ್ರ ಸುಂದರ ಸರಳಾಯರು ಹೋಟೆಲ್ ನಡೆಸಿದರು..ಈಗ ಸುಂದರ ಸರಳಾಯರ ಪುತ್ರ ರಾಘವೇಂದ್ರ ಸರಳಾಯರು ಹೋಟೆಲ್ ಮುನ್ನಡೆಸುತ್ತಾರೆ. ತಲೆಮಾರು ಬದಲಾದರೂ ಹೋಟೆಲ್ನಲ್ಲಿ ದರವೂ ಏರಿಲ್ಲ..ಗುಣಮಟ್ಟವೂ ಕಡಿಮೆಯಾಗಿಲ್ಲ.
ಬೆಲೆ ಏರಿಕೆ, ತೀವ್ರವಾದಾಗಲೂ, ಹೋಟೆಲ್ಗಳಲ್ಲಿ ಊಟದ ದರ ದಿನೇ ದಿನೇ ಏರಿ ಗಗನಮುಖಿಯಾಗಿದ್ದರೂ ಹೊಟೇಲ್ ರಾಮ್ ಪ್ರಸಾದ್ನಲ್ಲಿ ದರ ಪಟ್ಟಿ ಬದಲಾಗುವುದಿಲ್ಲ. ಈ ರೀತಿಯ ಊಟಕ್ಕೆ ಸಾಮಾನ್ಯವಾಗಿ ಹೋಟೆಲ್ಗಳಲ್ಲಿ 40 ರಿಂದ 50 ರೂಪಾಯಿ ದರ ಇದೆ. ಆದರೆ ಇಲ್ಲಿ ಮಾತ್ರ ಹತ್ತರ ಗಡಿ ದಾಟುವುದಿಲ್ಲ.
ತಮ್ಮ ಹೋಟೆಲ್ನಲ್ಲಿ ಊಟ ಬಡಿಸುತ್ತಿರುವ ರಾಘವೇಂದ್ರ ಸರಳಾಯ
1938ರಲ್ಲಿ ವೆಂಕಟರಮಣ ಸರಳಾಯರು ಸುಳ್ಯದಲ್ಲಿ ಹೊಟೇಲ್ ಪ್ರಾರಂಭಿಸಿದರು. ಕಡಿಮೆ ದರದಲ್ಲಿ ಊಟ ಸಿಗುವ ಹೋಟೆಲ್ ಎಂಬ ಹೆಸರು ಅಂದಿನಿಂದಲೇ ಇತ್ತು. ಆರಂಭದಲ್ಲಿ ಊಟದ ದರ 25 ಪೈಸೆ ಇತ್ತು. ಬಳಿಕ ಒಂದು ರೂ,
ಎರಡು ರೂಪಾಯಿ, ಮೂರು ರೂಪಾಯಿ, ನಾಲ್ಕು ರೂಪಾಯಿ, 5 ರೂಪಾಯಿ ಆಗಿತ್ತು ಊಟದ ದರ. ಕಳೆದ 10 ವರ್ಷಕ್ಕಿಂತ ಹೆಚ್ಚು ಸಮಯದಿಂದ 10 ರೂಪಾಯಿ ದರ ಇದೆ. ಸುಳ್ಯ ನಗರದಲ್ಲಿ ಗಂಜಿ, ಚಟ್ನಿ ನೀಡುವ ಹೋಟೆಲ್ಗಳಲ್ಲಿಯೂ ದರ 30- 40 ರೂಪಾಯಿ ಇದೆ. ಪ್ರತಿ ದಿನ ಸುಮಾರು 150 ವಿದ್ಯಾರ್ಥಿಗಳು ಸೇರಿ 200ಕ್ಕೂ ಅಧಿಕ ಮಂದಿ ಇಲ್ಲಿ ಊಟ ಸವಿಯುತ್ತಾರೆ. ಊಟ ಮಾತ್ರ ಅಲ್ಲದೆ ಇತರ ತಿಂಡಿಗಳಿಗೂ ಇಲ್ಲಿ ದರ ಕಡಿಮೆಯೇ. ತಲಾ 10 ರೂಪಾಯಂತೆ ಇಡ್ಲಿ ವಡೆ, ಪೂರಿ ಬನ್ಸ್, ಉಪ್ಪೀಟ್ಟು ಸಿಗುತ್ತದೆ. ಮೊಸರು ವಡೆ ದರ ರೂ.20.
ವೆಂಕಟ್ರಮಣ ಸರಳಾಯರು ಆರಂಭಿಸಿದ ಹೋಟೆಲ್ ಪುತ್ರ ಸುಂದರ ಸರಳಾಯರು 50 ವರ್ಷಗಳಿಗಿಂತಲೂ ಹೆಚ್ಚು ಸಮಯ ನಡೆಸಿದರು. ಈಗ ಅದೇ ಹಾದಿಯಲ್ಲಿ ಸುಂದರ ಸರಳಾಯರ ಪುತ್ರ ರಾಘವೇಂದ್ರ ಸರಳಾಯರು ಮುನ್ನಡೆಸುತ್ತಿದ್ದಾರೆ. ರಾಘವೇಂದ್ರ ಸರಳಾಯ, ಪತ್ನಿ ಅಳಕಾನಂದಿನಿ ಅವರು ಸೇರಿ ಊಟ, ತಿಂಡಿ ಸಿದ್ಧಪಡಿಸುತ್ತಾರೆ. ಹೋಟೆಲ್ ಕೆಲಸಗಳನ್ನು ಮಾಡುವುದಕ್ಕೆ ಮೂರು ಮಂದಿ ಜನರು ಕೂಡ ಇದೆ. ಕ್ಯಾಟರಿಂಗ್ ವ್ಯವಸ್ಥೆಯೂ ಇದೆ.
ಮೊದಲು ತೆರೆಯುವ ಹೋಟೆಲ್:
ಬಹಳ ಬೇಗನೆ ತೆರೆಯುವ ಹೋಟೆಲ್ ಎಂಬುದು ರಾಮ್ಪ್ರಸಾದ್ನ ಮತ್ತೊಂದು ವಿಶೇಷತೆ. ಮುಂಜಾನೆ 2.45ಕ್ಕೆ ಹೊಟೇಲ್ ಕಾರ್ಯಾರಂಭ ಮಾಡುತ್ತದೆ. ಇದರಿಂದ ಬೆಳಗ್ಗಿನ ಜಾವ ಪ್ರಯಾಣಿಸುವ ವಾಹನ ಚಾಲಕರಿಗೆ, ಪ್ರಯಾಣಿಕರಿಗೆ ಬಲು ಉಪಯೋಗಿ. ರಾತ್ರಿ ಒಂದು ಗಂಟೆಗೆ ಹೋಟೆಲ್ಗೆ ಆಹಾರ ಪದಾರ್ಥಗಳನ್ನು ತಯಾರಿಸಲು ಆರಂಭಿಸುತ್ತಾರೆ. ಸಂಜೆ 4.30ಕ್ಕೆ ಹೋಟೆಲ್ ಬಂದ್ ಮಾಡುತ್ತಾರೆ.
ವೆಂಕಟ್ರಮಣ ಸರಳಾಯ
ತನ್ನ ಅಜ್ಜ, ತಂದೆಯವರು ನಡೆಸಿದ ಪರಂಪರೆಯನ್ನು ಸಾಧ್ಯವಾದಷ್ಟು ಕಾಲ ಮುಂದುವರಿಸಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಾರೆ ರಾಘವೇಂದ್ರ ಸರಳಾಯರು. ಸಾಧ್ಯವಿರುವ ಕಾಲದವರೆಗೆ ಕಡಿಮೆ ದರದಲ್ಲಿಯೇ ಊಟ, ತಿಂಡಿ ನೀಡುವ ಪ್ರಯತ್ನ ಮಾಡಲಾಗುವುದು ಎನ್ನುತ್ತಾರವರು. ಅಗತ್ಯ ವಸ್ತುಗಳ ಬೆಲೆ ಏರಿಕೆಯ ತೀವ್ರತೆ ಹೇಗಿದೆಯೆಂದರೆ ಇವರು 10 ರೂಗೆ ಊಟ ನೀಡಲು ಆರಂಭಿಸಿದ ಸಮಯದಲ್ಲಿ
ಸುಂದರ ಸರಳಾಯ
ಒಂದು ಕೆಜಿ ಅಕ್ಕಿಯ ದರ 32 ಇತ್ತು..ಈಗ ಅದೇ ಅಕ್ಕಿಯ ಕೆಜಿ ದರ 49.. ಹೀಗೆ ಎಲ್ಲಾ ವಸ್ತುಗಳ ಬೆಲೆಯೂ 4-5 ಪಟ್ಟು ಏರಿದೆ. ಆದರೂ ಇವರು ದರ ಏರಿಸುವ ಮನಸ್ಸು ಮಾಡಿಲ್ಲ.. ದೇವರ ದಯೆಯೋ..ಜನರ ಆಶೀರ್ವಾದವೋ.. ನಮಗೆ ಇದುವರೆಗೆ ತೊಂದರೆ ಆಗಿಲ್ಲ ಎಂಬುದು ರಾಘವೇಂದ್ರರ ಮನದಾಳದ ಮಾತು. ಇಲ್ಲಿ ಊಟ ಮಾಡುವ ವಿದ್ಯಾರ್ಥಿಗಳು ಸೇರಿ ನೂರಾರು ಮಂದಿಯ ಹೊಟ್ಟೆ ತುಂಬುವಾಗ ಸರಳಾಯ ಕುಟುಂಬದ ಮನಸ್ಸು ತುಂಬಿ ಬರುತ್ತದೆ..!