ಸುಳ್ಯ:ಗಣಿತಕ್ಕೆ ಸಂಬಂಧಪಟ್ಟಂತೆ ವಿಶೇಷ ರೀತಿಯಲ್ಲಿ ಗಣಿತ ಹಬ್ಬ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಗಣಿತದ ಬಗ್ಗೆ ಮಕ್ಕಳಲ್ಲಿ ಉತ್ಸವ ಮೂಡಿಸುವ ಕಾರ್ಯ ಶ್ಲಾಘನೀಯ. ಗಣಿತ ಹಬ್ಬ ಮಕ್ಕಳಿಗೆ ಹೊಸ ಹುರುಪು ನೀಡಲಿ ಎಂದು ಮಂಗಳೂರು ಡಯಟ್ ಪ್ರಾಂಶುಪಾಲೆ ರಾಜಲಕ್ಷ್ಮಿ ಹೇಳಿದರು.ಸುಳ್ಯ ಸ.ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಜನಾರ್ಧನ ಮಾಸ್ಟರ್ ಗಣಿತ ಕೇಂದ್ರ ಸುಳ್ಯ, ಸರಕಾರಿ ಪದವಿ ಪೂರ್ವ
ಕಾಲೇಜು ಸುಳ್ಯ ಇದರ ಸಹಯೋಗದೊಂದಿಗೆ ಶ್ರೀನಿವಾಸ ರಾಮಾನುಜಂ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆ “ಗಣಿತ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗಣಿತ ಹಬ್ಬ ಕಾರ್ಯಕ್ರಮ ಎಲ್ಲಾ ಕಡೆ ಆಯೋಜನೆಗೆ ಸುಳ್ಯ ಪ್ರೇರಣೆಯಾಗಲಿ. ಇಲ್ಲಿನ ಕಾರ್ಯಕ್ರಮದ ಬಗ್ಗೆ ರಾಜ್ಯ ಮಟ್ಟಕ್ಕೂ ತಿಳಿಸುವ ಕೆಲಸ ಮಾಡಲಾಗುವುದು ಎಂದರು.
ಸುಳ್ಯ ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಶ್ರೀಧರ್ ಕೆ. ವಿಶೇಷ ಭಾಷಣ ಮಾಡುತ್ತಾ, ಗಣಿತ ಹಬ್ಬ ಎಂಬ ಅದ್ಭುತ ಹೆಸರನಿಟ್ಟುಕೊಂಡು ಕಾರ್ಯಕ್ರಮ ಆಯೋಜನೆ ಶ್ಲಾಘನೀಯ. ಗಣಿತ ಇಷ್ಟ ಹಾಗೂ ಕಷ್ಟ ಎಂದವರೂ ಇಲ್ಲಿ ಭಾಗವಹಿಸಿದ್ದರೀ. ಒಟ್ಟಿನಲ್ಲಿ ಎಲ್ಲರೂ ಗಣಿತವನ್ನು ಪ್ರೋತ್ಸಾಹಿಸುವವರು. ಗಣಿತ ಎಂಬುದು ಪ್ರಕೃತಿಯ ಭಾಷೆ. ಎಲ್ಲಾ ಕಲಿಕೆಯ ವಿಷಗಳಿಗೂ ಗಣಿತದ ಜ್ಞಾನ ಅತ್ಯವಶ್ಯಕ ಎಂದರು.
ಗಣಿತ ಕೇಂದ್ರದ ಅಧ್ಯಕ್ಷ ಎಂ.ಬಿ. ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ, ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ, ಗಣಿತ ಶಿಕ್ಷಕಿ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. ಎನ್.ಎ. ಜ್ಞಾನೇಶ್ ಸ್ವಾಗತಿಸಿದರು. ಹಿರಿಯ ಗಣಿತ ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.












