ಸುಳ್ಯ:ಲೇಖಕ, ಸಂಶೋಧಕ ಡಾ.ಸುಂದರ ಕೇನಾಜೆಯವರ ಜನಪ್ರಿಯ ನಿಲುಮೆ ಅಂಕಣ “ಮಾತಿಲ್ಲದ ಮಾತು” ಎಂಬ ಕೃತಿಯಾಗಿ ಇದೇ ಜ.31ರಂದು ಬೆಳಕು ಕಾಣಲಿದೆ. ಈಗಾಗಲೇ ಕನ್ನಡ ಮತ್ತು ತುಳು ಭಾಷೆಯಲ್ಲಿ ಪ್ರಕಟಗೊಂಡಿರುವ ಇವರ ಒಟ್ಟು ಕೃತಿಗಳಲ್ಲಿ ಇಪ್ಪತ್ತ ಮೂರನೇಯ ಕೃತಿಯಾಗಿ ಈ
ಮಾತಿಲ್ಲದ ಮಾತು ಸೇರ್ಪಡೆಗೊಳ್ಳುತ್ತಿದೆ. ಮೂರು ಕಥಾ ಸಂಕಲನ, ಎಂಟು ಸಂಶೋಧನಾ ಕೃತಿ, ಒಂದು ಪ್ರಬಂಧ ಸಂಕಲನ, ಎರಡು ವ್ಯಕ್ತಿಚಿತ್ರ, ಏಳು ಸಂಪಾದಿತ ಕೃತಿಗಳನ್ನು ಪ್ರಕಟಿಸಿರುವ ಡಾ.ಕೇನಾಜೆಯವರ ಎರಡನೇ ಅಂಕಣ ಬರಹದ ಕೃತಿಯೂ ಇದಾಗಿದೆ.ಮೈಸೂರಿನ ಪ್ರತಿನಿಧಿ ಪತ್ರಿಕೆಗೆ ಕಳೆದ ಒಂದು ವರ್ಷಗಳ ಕಾಲ ನಿರಂತವಾಗಿ ಬರೆದ 51 ಬರಹಗಳು ಹಾಗೂ ‘ಸುಳ್ಯ ಮಿರರ್’ ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಗೊಂಡ “ನಿಲುಮೆ” ಅಂಕಣವನ್ನು ಒಟ್ಟು ಸೇರಿಸಿ ಇಲ್ಲಿ ಕೃತಿ ರೂಪದಲ್ಲಿ ಪ್ರಕಟಕೊಳ್ಳುತ್ತಿದೆ.
ನೂರ ಎಂಬತ್ತು ಪುಟಗಳ ಈ ಕೃತಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಪ್ರಾದೇಶಿಕ ಚರಿತ್ರೆ, ಜಾನಪದ, ಕಲಾವಿಮರ್ಶೆ, ಮನೋವಿಜ್ಞಾನ, ಶಿಕ್ಷಣ, ವ್ಯಕ್ತಿ ಮತ್ತು ಕೃತಿ ಪರಿಚಯ ಎನ್ನುವ ವೈವಿದ್ಯ ವಸ್ತು ಬರಹಗಳಿವೆ. ಅಧ್ಯಯನ, ಅನುಭವ ಮತ್ತು ಕ್ಷೇತ್ರ ಕಾರ್ಯದ ಮಾಹಿತಿಯನ್ನು ಒಳಗೊಂಡ ಬರಹಗಳು ಇಲ್ಲಿಯದ್ದಾಗಿವೆ. ಎಲ್ಲ ಲೇಖನಗಳು ಒಂದೇ ಚೌಕಟ್ಟಿನೊಳಗೆ ಒಳಗೊಳ್ಳುವಂತೆ ಪ್ರಕಟಗೊಂಡಿದ್ದರೂ ಪ್ರತೀ ಲೇಖನಗಳು ಆಕರ್ಷಕ ಶೀರ್ಷಿಕೆ ಮತ್ತು ಗಮನ ಸೆಳೆಯುವ ಒಳನೋಟಗಳಿಂದ ಕೂಡಿದ್ದಾಗಿವೆ. ಮೈಸೂರಿನ ಮಡಿಲು ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ. ಈ ಅಂಕಣ ಪ್ರಕಟಗೊಂಡಾಗ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆಗಳು ಅದರಲ್ಲೂ ಕನ್ನಡದ ಹಲವು ಹಿರಿಯ ಸಾಹಿತಿಗಳು ವ್ಯಕ್ತಪಡಿಸಿದ ಸಕಾರಾತ್ಮಕ ಪ್ರತಿಕ್ರಿಯೆಗಳು ಅಂಕಣದ ಮೌಲ್ಯ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
ಈ ಅಭಿಪ್ರಾಯಗಳಲ್ಲಿ ಒಂದಷ್ಟನ್ನು ಆಯಾ ಲೇಖನದ ಕೆಳಭಾಗದಲ್ಲಿ ಪ್ರಕಟಿಸಲಾಗಿರುವುದು ಕನ್ನಡ ಪುಸ್ತಕ ಪ್ರಕಟಣಾ ವಿಭಾಗದ ಹೊಸ ಪ್ರಯೋಗ ಎನ್ನಬಹುದು. ಅಲ್ಲದೇ ಲೇಖನ ಪ್ರಕಟಗೊಳ್ಳುತ್ತಿದ್ದ ಕಾಲದಲ್ಲೇ ಅನೇಕ ಮಾಧ್ಯಮಗಳ ಮೂಲಕವೂ ಇದು ಮರು ಪ್ರಕಟಗೊಳ್ಳುತ್ತಿತ್ತು. ಹೀಗೆ ಮರು ಪ್ರಕಟಣೆಗೊಳಿಸಿದ ನೂರಕ್ಕೂ ಹೆಚ್ಚಿನ ಆಸಕ್ತರ ಹೆಸರುಗಳನ್ನೂ ಕೃತಿಯ ಕೊನೆಗೆ ಪ್ರಕಟಿಸಿರುವುದೂ ಹೊಸ ವಿಧಾನ ಎನ್ನಬಹುದು.

ಈ ಕೃತಿಗೆ ಪ್ರತಿನಿಧಿ ಪತ್ರಿಕೆಯ ಹಿರಿಯ ಸುದ್ದಿ ಸಂಪಾದಕ ಮುಳ್ಳೂರು ರಾಜು ಮುನ್ನುಡಿಯ ಮಾತುಗಳನ್ನೂ ಕನ್ನಡದ ಖ್ಯಾತ ಸಾಹಿತಿಗಳ ಅಭಿಪ್ರಾಯಗಳ ಬೆನ್ನುಡಿಯ ಕೆಲವು ವಾಕ್ಯಗಳನ್ನೂ ನೀಡಲಾಗಿದೆ. ಆಕರ್ಷಕ ಮುಖಪುಟವನ್ನೂ ಈ ಕೃತಿ ಹೊಂದಿದೆ. ಅಂಕಣ ಕಾಲದಲ್ಲಿ ಬಹಳ ಜನಪ್ರಿಯವಾಗಿದ್ದ ಈ ಲೇಖನಗಳು ಒಂದೇ ಗುಚ್ಛವಾಗಿ ಇದೀಗ ಲಭ್ಯವಾಗುತ್ತಿದೆ. ಜ.31 ರಂದು ಸಂಜೆ 4ರಿಂದ ಸುಳ್ಯ ಪ್ರೆಸ್ನಲ್ಲಿ ನಡೆಯುವ ಆಪ್ತ ಕಾರ್ಯಕ್ರಮದಲ್ಲಿ ಈ ಕೃತಿ ಬಿಡುಗಡೆಗೊಳ್ಳುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಖ್ಯಾತ ವ್ಯಂಗ್ಯಚಿತ್ರಕಾರ, ವಿಮರ್ಶಕ ದಿನೇಶ್ ಕುಕ್ಕುಜಡ್ಕ ಕೃತಿಯ ಕುರಿತು ಮಾತನಾಡಲಿದ್ದಾರೆ. ಲೇಖಕ ಡಾ.ಸುಂದರ ಕೇನಾಜೆ, ಪ್ರೆಸ್ ಕ್ಲಬ್ ನ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಅಧ್ಯಕ್ಷ ಯಶ್ವಿತ್ ಕಾಳಂಮನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಡಾ.ಸುಂದರ ಕೇನಾಜೆ.
ಹಲವು ವರ್ಷಗಳ ವರೆಗೆ ಸ್ಥಳೀಯ ಸುದ್ದಿ ಬಿಡುಗಡೆ, ಸಂಯುಕ್ತ ಕರ್ನಾಟಕ ಪತ್ರಿಕೆಗಳ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಡಾ.ಕೇನಾಜೆ ಈ ಹಿಂದೆ ವಾರ್ತಭಾರತಿ, ವಿಜಯವಾಣಿ ಮತ್ತು ಪಯಸ್ವಿನಿ ಪತ್ರಿಕೆಯ ಅಂಕಣಕಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಹತ್ತುಕ್ಕೂ ಹೆಚ್ಚಿನ ಸಾಕ್ಷ್ಯಚಿತ್ರಗಳಿಗೆ ಚಿತ್ರಕಥೆ ಮತ್ತು ನಿರ್ದೇಶನ ನೀಡಿದ್ದಲ್ಲದೇ ನಾಡಿನ ನಾನಾ ಪತ್ರಿಕೆಗಳಿಗೆ, ಸ್ಮರಣ ಸಂಚಿಕೆ ಮತ್ತು ಅಭಿನಂದನಾ ಗ್ರಂಥಗಳಿಗೆ ನಿರಂತರ ಕಥೆ, ಲೇಖನ, ಸಂಶೋಧನಾ ಬರಹಗಳನ್ನು ಹಾಗೂ ಅನೇಕ ಸಾಹಿತ್ಯ ಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸುತ್ತಾ ಬಂದಿರುತ್ತಾರೆ.
ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಪದಾಧಿಕಾರಿಗಳು ಕೋರಿದ್ದಾರೆ.





