ಸುಳ್ಯ:ಲೇಖಕ, ಸಂಶೋಧಕ ಡಾ.ಸುಂದರ ಕೇನಾಜೆಯವರ “ಮಾತಿಲ್ಲದ ಮಾತು” ಕೃತಿಇಂದು (ಜ.31ರಂದು) ಬಿಡುಗಡೆಯಾಗಲಿದೆ. ಸಂಜೆ 4ರಿಂದ ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಖ್ಯಾತ
ವ್ಯಂಗ್ಯಚಿತ್ರಕಾರ, ವಿಮರ್ಶಕ ದಿನೇಶ್ ಕುಕ್ಕುಜಡ್ಕ ಕೃತಿಯ ಕುರಿತು ಮಾತನಾಡಲಿದ್ದಾರೆ. ಲೇಖಕ ಡಾ.ಸುಂದರ ಕೇನಾಜೆ, ಪ್ರೆಸ್ ಕ್ಲಬ್ ನ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಅಧ್ಯಕ್ಷ ಯಶ್ವಿತ್ ಕಾಳಂಮನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಈಗಾಗಲೇ ಕನ್ನಡ ಮತ್ತು ತುಳು ಭಾಷೆಯಲ್ಲಿ ಪ್ರಕಟಗೊಂಡಿರುವ ಇವರ ಒಟ್ಟು ಕೃತಿಗಳಲ್ಲಿ ಇಪ್ಪತ್ತ ಮೂರನೇಯ ಕೃತಿಯಾಗಿ ಈ ಮಾತಿಲ್ಲದ ಮಾತು ಸೇರ್ಪಡೆಗೊಳ್ಳುತ್ತಿದೆ.ಮೂರು ಕಥಾ ಸಂಕಲನ, ಎಂಟು ಸಂಶೋಧನಾ ಕೃತಿ, ಒಂದು ಪ್ರಬಂಧ ಸಂಕಲನ, ಎರಡು ವ್ಯಕ್ತಿಚಿತ್ರ, ಏಳು ಸಂಪಾದಿತ ಕೃತಿಗಳನ್ನು ಡಾ.ಕೇನಾಜೆ ಪ್ರಕಟಿಸಿದ್ದಾರೆ.
ನೂರ ಎಂಬತ್ತು ಪುಟಗಳ ಮಾತಿಲ್ಲದ ಮಾತು ಕೃತಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಪ್ರಾದೇಶಿಕ ಚರಿತ್ರೆ, ಜಾನಪದ, ಕಲಾವಿಮರ್ಶೆ, ಮನೋವಿಜ್ಞಾನ, ಶಿಕ್ಷಣ, ವ್ಯಕ್ತಿ ಮತ್ತು ಕೃತಿ ಪರಿಚಯ ಎನ್ನುವ ವೈವಿದ್ಯ ವಸ್ತು ಬರಹಗಳಿವೆ. ಅಧ್ಯಯನ, ಅನುಭವ ಮತ್ತು ಕ್ಷೇತ್ರ ಕಾರ್ಯದ ಮಾಹಿತಿಯನ್ನು ಒಳಗೊಂಡ ಬರಹಗಳು ಇದೆ. ಎಲ್ಲ ಲೇಖನಗಳು ಒಂದೇ ಚೌಕಟ್ಟಿನೊಳಗೆ ಒಳಗೊಳ್ಳುವಂತೆ ಪ್ರಕಟಗೊಂಡಿದ್ದರೂ ಪ್ರತೀ ಲೇಖನಗಳು ಆಕರ್ಷಕ ಶೀರ್ಷಿಕೆ ಮತ್ತು ಗಮನ ಸೆಳೆಯುವ ಒಳನೋಟಗಳಿಂದ ಕೂಡಿದ್ದಾಗಿವೆ. ಮೈಸೂರಿನ ಮಡಿಲು ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ.
ಹಿರಿಯ ಪತ್ರಕರ್ತ ಮುಳ್ಳೂರು ರಾಜು ಮುನ್ನುಡಿಯ ಮಾತುಗಳನ್ನೂ ಕನ್ನಡದ ಖ್ಯಾತ ಸಾಹಿತಿಗಳ ಅಭಿಪ್ರಾಯಗಳ ಬೆನ್ನುಡಿಯ ಕೆಲವು ವಾಕ್ಯಗಳನ್ನೂ ನೀಡಲಾಗಿದೆ. ಆಕರ್ಷಕ ಮುಖಪುಟವನ್ನೂ ಈ ಕೃತಿ ಹೊಂದಿದೆ.





