ಸುಳ್ಯ:ರಾಮನನ್ನು ಬಿಟ್ಟು ರಾಷ್ಟ್ರ ಇಲ್ಲ, ರಾಷ್ಟ್ರ ಬಿಟ್ಟು ರಾಮ ಇಲ್ಲ. ಆದುದರಿಂದ ರಾಮ ಭಕ್ತಿಯೊಂದಿಗೆ ರಾಷ್ಟ್ರ ಕಟ್ಟುವ ಕೆಲಸ ಆಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಮಂತ್ರಾಕ್ಷತೆ ಮತ್ತು ಆಮಂತ್ರಣವನ್ನು ಮನೆ ಮನೆ ತಲುಪಿಸುವ ಹಿನ್ನಲೆಯಲ್ಲಿ ಸುಳ್ಯ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಸುಳ್ಯ ತಾಲೂಕಿನ

ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಮಂತ್ರಾಕ್ಷತೆ ಮತ್ತು ಆಮಂತ್ರಣವನ್ನು ಮನೆ ಮನೆ ತಲುಪಿಸುವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು. ಭಾರತದ ಮೌಲ್ಯ ಅಡಗಿರುವುದು ಆಧ್ಯಾತ್ಮಿಕತೆಯಲ್ಲಿ. ತ್ಯಾಗ ಮತ್ತು ಸೇವೆಯಿಂದ ಭಾರತ ಬೆಳಗಿದೆ ಎಂದ ಅವರು ನಮ್ಮ ಕಾಲದಲ್ಲಿ ರಾಮ ಮಂದಿರ ನಿರ್ಮಾಣ ಆಗಿದೆ ಎಂಬುದು ನಮ್ಮ ಪುಣ್ಯ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಫಲವಾಗಿ ರಾಮ ಮಂದಿರ ನಿರ್ಮಾಣ ಆಗಿದೆ. ಅವರ ದೂರದರ್ಶಿತ್ವಕ್ಕೆ ನಾವು ತಲೆಭಾಗಬೇಕು ಎಂದು ಹೇಳಿದರು. ಮನೆ ಮನೆಗಳು ರಾಮ ಮಂದಿರವಾಗಬೇಕು ಆ ಮೂಲಕ ಮನೆಗಳು

ಪ್ರೇಮ ಪೂರಿತವಾಗಲಿ ಎಂದು ಆಶಿಸಿದರು. ಸನಾತನ ಹಿಂದೂ ಧರ್ಮ ನಿತ್ಯ ನೂತನ, ಈ ಧರ್ಮದ ಅನುಷ್ಠಾನದ ಮೂಲಕ ಭಗವಂತನ ಪ್ರೀತಿಗೆ ಪಾತ್ರರಾಗಬೇಕು. ರಾಮನ ಭಕ್ತರಾಗಬೇಕು ಎಂದು ಹೇಳಿದರು.
ಆರ್ಎಸ್ಎಸ್ ತಾಲೂಕು ಸಂಘ ಚಾಲಕ್ ಚಂದ್ರಶೇಖರ ತಳೂರು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಸಚಿವ ಎಸ್.ಅಂಗಾರ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಪುರೋಹಿತ ನಾಗರಾಜ ಭಟ್, ಸುಬ್ರಹ್ಮಣ್ಯ ಉಪಾಧ್ಯಾಯ, ನ.ಪಂ.ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ, ವಿನಯಕುಮಾರ್ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ ಸ್ವಾಗತಿಸಿ, ವಿಎಚ್ಪಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಒಡಿಯೂರು ಶ್ರೀಗಳು ಅವರು ಬೂತ್ ಕಾರ್ಯಕರ್ತರಿಗೆ ಮಂತ್ರಾಕ್ಷತೆ ವಿತರಿಸಿದರು.















