ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯದಲ್ಲಿ ಹಲವೆಡೆ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆ ಬರುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೂನ್ 7 ರವರೆಗೆ ಮಳೆಯಾಗಲಿದೆ ಎಂದು
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು,ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.
ಹವಾಮಾನದಲ್ಲಿ ಪುನಃ ವೈಪರಿತ್ಯಗಳು ಉಂಟಾದರೆ ಮುಂಗಾರು ಪ್ರವೇಶ ಮತ್ತೆ ಕೆಲವು ದಿನ ವಿಳಂಬವು ಆಗಬಹುದು ಎಂದು ಅಂದಾಜಿಸಲಾಗಿದೆ. ಪ್ರತಿಭಾರಿಯು ವಾಡಿಕೆಯಂತೆ ನೈಋತ್ಯ ಮುಂಗಾರು ಮಾರುತುಗಳು ಜೂನ್ 1ರಂದು ಕೇರಳ ಪ್ರವೇಶಿಸುತ್ತದೆ. ಅದರೊಂದಿಗೆ ಕೆಲವು ದಿನಗಳಲ್ಲಿ ಕರ್ನಾಟಕ ಪ್ರವೇಶಿಸುತ್ತವೆ. ಈ ಬಾರಿ ನಾಲ್ಕು ದಿನ ವಿಳಂಬವಾಗಿ ಜೂ.4 ರಂದು ಪ್ರವೇಶ ಆಗಲಿದೆ ಎನ್ನಲಾಗಿದೆ. ಸದ್ಯ ಮತ್ತೆ ಕೆಲವು ದಿನ ತಡವಾದರೂ ಆಗಬಹುದು ಎಂದು ಹೇಳಲಾಗುತ್ತಿದೆ. ಕಳೆದ ವರ್ಷ 2022ರಲ್ಲಿ ಮೇ 29ರಂದು ಮುಂಗಾರು ಆರಂಭವಾಗಿತ್ತು.