ನವದೆಹಲಿ:ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಭೇಟಿಯಾಗಿ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ರಸ್ತೆ ಮೂಲಸೌಕರ್ಯ ಯೋಜನೆಗಳ ಕುರಿತು ಚರ್ಚೆ ನಡೆಸಿದರು.ಶಿರಾಡಿ ಘಾಟ್ ಮೂಲಕ ರಸ್ತೆ ಮತ್ತು ರೈಲು ಅಭಿವೃದ್ಧಿಗಾಗಿ
ಸಮಗ್ರ ಡಿಪಿಆರ್ ತಯಾರಿಕೆಯ ಅಗತ್ಯತೆಯ ಮನವಿಯನ್ನು ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೈಸ್ಪೀಡ್ ಸಂಪರ್ಕವನ್ನು ಸಾಧಿಸಲು ಸಚಿವಾಲಯವು ರೈಲ್ವೆ ಇಲಾಖೆಯೊಂದಿಗೆ ಜಂಟಿಯಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.
ಪೋರ್ಟ್ ಸಂಪರ್ಕ ರಸ್ತೆಯ ಬಗ್ಗೆಯೂ ಚರ್ಚೆ ನಡೆಸಿ, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಪ್ರಾಮುಖ್ಯತೆ ಮತ್ತು ಇದನ್ನು ಮೇಲ್ದರ್ಜೆಗೇರಿಸುವ ಅಗತ್ಯತೆಯ ಬಗ್ಗೆ ಅವರ ಗಮನ ಸೆಳೆಯಲಾಯಿತು.
ಮಾಣಿ-ಸಂಪಾಜೆ ಚತುಷ್ಪಥ ಯೋಜನೆಯನ್ನು ಸಚಿವಾಲಯದ ವಾರ್ಷಿಕ ಯೋಜನೆ ಭಾಗವಾಗಿಸಬೇಕು ಮತ್ತು ಅದನ್ನು ಮಂಜೂರು ಮಾಡಲು ಅಗತ್ಯವಾದ ಅನುಮೋದನೆಗಳನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ವಿನಂತಿಸಲಾಯಿತು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.












