ಮಂಗಳೂರು: ಮಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಪಂಪ್ವೆಲ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಕೃತಕ ನೆರ ಸೃಷ್ಠಿಯಾಗಿದೆ. ಪಂಪ್ವೆಲ್ ವೃತ್ತ ಪ್ರದೇಶ ನೀರು ತುಂಬಿ ಕೆರೆಯಂತಾಗಿತ್ತು.ರಸ್ತೆಯಲ್ಲೆ ಭಾರಿ ನೀರು ಹರಿದ ಪರಿಣಾಮ ರಾಷ್ಟ್ರೀಯ
ಹೆದ್ದಾರಿ 66 ಹಾಗೂ ಮಂಗಳೂರು ಬಿ.ಸಿ.ರೋಡು ಕಡೆಗೆ ಸಾಗುವ ವಾಹನ ಸಂಚಾರಕ್ಕೆ ಕೆಲವು ಕಾಲ ತಡೆ ಉಂಟಾಗಿತ್ತು. ಪಂಪ್ವೆಲ್ ವೃತ್ತದ ಪಕ್ಕದಲ್ಲಿರುವ ರಾಜ ಕಾಲುವೆಗಳು ತುಂಬಿ ನೀರು ರಸ್ತೆಯಲ್ಲಿ ಹರಿದು ರಸ್ತೆ ಜಲವೃತ್ತಗೊಂಡಿತು. ಫ್ಲೈಒವರ್ನ ಅಡಿಭಾಗವೂ ಸೇರಿದಂತೆ ಪಂಪ್ವೆಲ್ ವೃತ್ತದ ನಾಲ್ಕು ಕಡೆಗಳಲ್ಲೂನೀರು ಭಾರಿ ಪ್ರಮಾಣದಲ್ಲಿ ಹರಿದು ಬಂತು ಇದರಿಂದಾಗಿ ಮಂಗಳೂರಿನಿಂದ ಕಾಸರಗೋಡು, ಬಿ.ಸಿ.ರೋಡು, ನಂತೂರು, ಮಂಗಳೂರು ನಗರ ಸೇರಿದಂತೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ನಗರದ ವಿವಿಧ ಪ್ರದೇಶಗಳು ಮಳೆಯಿಂದ ಜಲಾವೃತವಾಗಿದೆ. ಕೆಲವೆಡೆ ಕೃತಕ ನೆರೆ ಸೃಷ್ಠಿಯಾಗಿ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.