*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಗಡಿ ಗ್ರಾಮ ಮಂಡೆಕೋಲಿನಲ್ಲಿ ಯಕ್ಷಗಾನ ಆಸಕ್ತರು, ಕಲಾವಿದರು, ಸಂಘಟಕರು ಹಲವರು ಇದ್ದಾರೆ. ಗ್ರಾಮದ ಜನರ ರಕ್ತದಲ್ಲಿ ಸೇರಿ ಹೋಗಿರುವ ಯಕ್ಷಗಾನ ಕಲೆಯನ್ನು ಎಳೆಯ ತಲೆಮಾರಿನಲ್ಲಿ ಪಸರಿಸಬೇಕು, ಯಕ್ಷಗಾನ ಕಲೆಯನ್ನು ಬೆಳೆಸಬೇಕು ಎಂದು ಇಲ್ಲಿ ವಿವಿಧೆಡೆ ಯಕ್ಷಗಾನ ಕಲಿಕೆಯ ಕಲರವ ಆರಂಭಗೊಂಡಿದೆ. ಮುಖ್ಯವಾಗಿ ಮಂಡೆಕೋಲಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು
ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವಾದ ‘ಅರಿವು ಕೇಂದ್ರ’ದಲ್ಲಿ ಕರಾವಳಿಯ
ಗಂಡು ಕಲೆ ಯಕ್ಷಗಾನ ಕಲಿಸಲಾಗುತ್ತದೆ. ಮಂಡೆಕೋಲು ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ವತಿಯಿಂದ ಯಕ್ಷಗಾನ ಶಿಕ್ಷಣ ಅಭಿಯಾನ ‘ಯಕ್ಷಧ್ರುವ-ಯಕ್ಷ ಶಿಕ್ಷಣ’ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನವನ್ನು ಕಲಿಸಲಾಗುತ್ತದೆ. ಸುಮಾರು ಒಂದು ತಿಂಗಳಿನಿಂದ ಇಲ್ಲಿ ಯಕ್ಷಗಾನದ ಗೆಜ್ಜೆ ನಾದ ಅನುರಣಿಸುತಿದೆ.
ಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಈಗ ಯಕ್ಷ ಶಿಕ್ಷಣದ ಧೀಂತರಿಕಿಟ ಅಭ್ಯಸಿಸುತ್ತಿದ್ದಾರೆ. ಯಕ್ಷಗಾನ ಗುರು ಯೋಗೀಶ್ ಶರ್ಮ ಅಳದಂಗಡಿ ಅವರು ಯಕ್ಷಗಾನ ಕಲಿಸುತ್ತಿದ್ದಾರೆ .

ಮಂಡೆಕೋಲು ಶಾಲೆಯಲ್ಲಿ ಯಕ್ಷಗಾನ ಕಲಿಕೆ
ಗ್ರಂಥಾಲಯದಲ್ಲಿ ಎರಡು ವರ್ಷದಿಂದ ಯಕ್ಷ ಶಿಕ್ಷಣ:
ಮಂಡೆಕೋಲು ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತ್ತಿದ್ದರೆ, ಹಲವಾರು ಚಟುವಟಿಕೆಗಳ ತಾಣವಾಗಿರುವ ಕೇಂದ್ರ ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ವಿವಿಧ ಶಾಲೆಗಳಲ್ಲಿ ಕಲಿಯುವ ಗ್ರಾಮದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಕ್ಷಗಾನ ಅಧ್ಯಯನ ನಡೆಸಲಾಗುತ್ತದೆ.
ಯಕ್ಷಗಾನ ಗುರು ಯೋಗೀಶ್ ಶರ್ಮ ಅಳದಂಗಡಿ ಅವರೇ ಇಲ್ಲಿ ಕೂಡ ಮಕ್ಕಳಿಗೆ ಯಕ್ಷ ಶಿಕ್ಷಣ ಧಾರೆಯೆರೆಯುತ್ತಾರೆ.
ಎರಡು ವರ್ಷಗಳಿಂದ ಅರಿವು ಕೇಂದ್ರದಲ್ಲಿ ಮುಗ್ಧ ಕಂಠಗಳಿಂದ ಯಕ್ಷಗಾನದ ಅಬ್ಬರ,ಕಾಲುಗಳಿಂದ ಗಜ್ಜೆನಾದ ಅನುರಣಿಸುತಿದೆ.
ಶಾಲೆಯಲ್ಲಿ ವಾರದ ಪ್ರತಿ ಮಂಗಳವಾರ ಯಕ್ಷ ಶಿಕ್ಷಣ ನೀಡುತ್ತಿದ್ದರೆ ಗ್ರಂಥಾಲಯದಲ್ಲಿ ಪ್ರತಿ ಭಾನುವಾರ ಯಕ್ಷಗಾನ ಕಲಿಸಲಾಗುತ್ತದೆ. ಇಲ್ಲಿ
ಭಾಗವತಿಕೆ, ಅರ್ಥಗಾರಿಕೆ, ನೃತ್ಯ ಕಲಿಸಲಾಗುತ್ತದೆ. ಚೆಂಡೆ, ಭಾಗವತಿಕೆ ಸಹೀತ ಯಕ್ಷಗಾನ ಕಲಿಕೆ ಇಲ್ಲಿನ ವಿಶೇಷ. 7ರಿಂದ 15 ವರ್ಷದವರೆಗಿನ ಮಕ್ಕಳು ಯಕ್ಷಶಿಕ್ಷಣ ನೀಡಲಾಗುತ್ತದೆ.

ಮಂಡೆಕೋಲು ಗ್ರಂಥಾಲಯದಲ್ಲಿ ಯಕ್ಷಗಾನ ತರಬೇತಿ
ಅರಿವು ಕೇಂದ್ರದಲ್ಲಿ ಯಕ್ಷಗಾನ ಕಲಿಯುವ ಎಲ್ಲಾ ಮಕ್ಕಳಿಗೆ ರಂಗ ಪ್ರವೇಶ ಆಗಿದೆ. ಈ ಮಕ್ಕಳು ವೇಷ ಹಾಕಿ ವೇದಿಕೆಯಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ‘ಏಕಾದಶಿ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಹಾಗೂ ಗಣೇಶೋತ್ಸವ ಸಂದರ್ಭದಲ್ಲಿ ‘ಭಾರ್ಗವ ವಿಜಯ, ಸುದರ್ಶನ ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಈ ಭಾರಿ ‘ಮಹಿಷಮರ್ಧಿನಿ ಮಹಾತ್ಮೆ’ ಎಂಬ ಯಕ್ಷಗಾನ ಕಲಿಸಲಾಗುತ್ತಿದೆ.
ಅರಿವಿನ ಕೇಂದ್ರ:
ಹತ್ತು ಹಲವು ಕ್ರಿಯಾಶೀಲ ಚಟುವಟಿಕೆಗಳದಿಗೆ ಕಾರ್ಯನಿರ್ವಹಿಸುವ ಮಂಡೆಕೋಲು ಅರಿವು ಕೇಂದ್ರ(ಗ್ರಂಥಾಲಯ) ನಿಜ ಅರ್ಥದಲ್ಲಿ ಅರಿವಿನ ಕಣಜವಾಗಿದೆ.ಕರ್ನಾಟಕ ಕೇರಳ ಗಡಿ ಪ್ರದೇಶದಲ್ಲಿರುವ ಗ್ರಂಥಾಲಯ ನಿರಂತರವಾಗಿ ಕಾರ್ಯಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತಿದೆ. ಯಕ್ಷಗಾನ ಕಲಿಕೆ ಮಾತ್ರವಲ್ಲದೆ ಪಕ್ಷಿ ಪ್ರಾಣಿಗಳ ಪರಿಚಯ, ಬೇಸಿಗೆ ಶಿಬಿರ, ಸಂಗೀತ, ನೃತ್ಯ,ಯೋಗ, ಯಕ್ಷಗಾನ, ಜಾನಪದೀಯ ಕ್ರೀಡೆ ಹೀಗೆ ಮಕ್ಕಳ ಜ್ಞಾಪನ ಶಕ್ತಿ ಹೆಚ್ಚಿಸುವ

ಚಟುವಟಿಕೆಗಳನ್ನು ನಡೆಸುತಿದೆ.ಗೂಗಲ್ ವಾಯ್ಸ್ ಸರ್ಚ್ ‘ಅಲೆಕ್ಸಾ’, ಅಮ್ಮನಿಗೊಂದು ಪುಸ್ತಕ, ಸ್ಪೋಕನ್ ಇಂಗ್ಲಿಷ್, ಚೆಸ್, ಕ್ಯಾರಂ, ಕಲಿಕೆ ಹೀಗೆ ಮಕ್ಕಳಿಗೆ ವೈವಿಧ್ಯತೆಯನ್ನು ಉಣಬಡಿಸುವ ತಾಣವಾಗಿದೆ ಈ ಗ್ರಂಥಾಲಯ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವಾದ ಅರಿವು ಕೇಂದ್ರದ ಮೇಲ್ವಿಚಾರಕಿ ಸಾವಿತ್ರಿರಾಮ್ ಕಣೆಮರಡ್ಕ ಅವರ ವಿಶೇಷ ಆಸಕ್ತಿಯಿಂದ ಈ ಅರಿವು ಕೇಂದ್ರವನ್ನು ಮಾದರಿಯಾಗಿ ರೂಪಿಸಿದ್ದಾರೆ.2020ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನೀಡುವ ಸಿಬ್ಬಂದಿ ಸೇವಾ ಪ್ರಶಸ್ತಿ ಇವರಿಗೆ ಲಭಿಸಿತ್ತು.
‘ಯಕ್ಷಧ್ರುವ ಪಟ್ಲ ಫೌಂಡೇಷನ್ ವತಿಯಿಂದ ಯಕ್ಷಗಾನ ಶಿಕ್ಷಣ ನೀಡುತ್ತಾರೆ ಎಂದು ತಿಳಿದು ಅರ್ಜಿ ಸಲ್ಲಿಸಿದ ಕಾರಣ ನಮ್ಮ ಶಾಲೆಯಲ್ಲಿ ಯಕ್ಷಗಾನ ಕಲಿಕೆ ಆರಂಭಿಸಲಾಗಿದೆ. ನೂರಕ್ಕೂ ಅಧಿಕ ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಯಲು ಇದು ಸಹಾಯಕವಾಗುತಿದೆ. ಗ್ರಾಮದ ಮಕ್ಕಳಿಗೆ ಯಕ್ಷಗಾನದ ಆಸಕ್ತಿ ಬೆಳೆಸಲು ಯಕ್ಷ ಕಲಿಕೆಯನ್ನು ನಿರಂತರ ನಡೆಸಲು ನಿರ್ಧರಿಸಲಾಗಿದೆ.
-ಸುರೇಶ್ ಕಣೆಮರಡ್ಕ
ಅಧ್ಯಕ್ಷರು.ಎಸ್ಡಿಎಂಸಿ. ಮಂಡೆಕೋಲು ಉನ್ನತೀಕರಿಸಿದ ಹಿ.ಪ್ರಾ.ಶಾಲೆ.

ಗ್ರಂಥಾಲಯಗಳು ಎಂದರೆ ಅದು ಅರಿವಿನ ಕೇಂದ್ರ, ಇಲ್ಲಿ
ಎಲ್ಲಾ ರೀತಿಯ ಶಿಕ್ಷಣಗಳು ದೊರೆಯಬೇಕು ಎಂಬ ಹಿನ್ನಲೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಯನ್ನು ಕಲಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಯಕ್ಷಗಾನ ಕಲಿಕೆಯಿಂದ ಮಕ್ಕಳಿಗೆ ಭಾಷಾ ಸುದ್ದಿ, ಕಂಠಪಾಠ, ಉಚ್ಛಾರ ಸ್ಪಷ್ಟವಾಗುತ್ತದೆ. ಪುರಾಣ, ಚರಿತ್ರೆಯ ಅರಿವಿನ ಜೊತೆಗೆ ವೇದಿಕೆ ಎರುವ ಧೈರ್ಯ ಬರುತ್ತದೆ.
-ಸಾವಿತ್ರಿರಾಮ್ ಕಣೆಮರಡ್ಕ
ಮೇಲ್ವಿಚಾರಕಿ ಅರಿವು ಕೇಂದ್ರ.





