ಮಂಡೆಕೋಲು: ಸುಳ್ಯದ ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಅವರು ಸರ್ವಾಧ್ಯಕ್ಷರಾಗಿರುವ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ನೀಡಿ ಮಂಡೆಕೋಲು ಗ್ರಂಥಾಲಯದ ವತಿಯಿಂದ ಪತ್ರ ಅಭಿಯಾನ ಆರಂಭಿಸಲಾಗಿದೆ.ಗ್ರಂಥಾಲಯಕ್ಕೆ ಬರುವ ಮಕ್ಕಳು, ಪೋಷಕರ ಮೂಲಕ ಅವರ ಮಿತ್ರರಿಗೆ, ಸಂಬಂಧಿಕರಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ
ಪೋಸ್ಟ್ ಕಾರ್ಡ್ ಬರೆಯುವ ಅಭಿಯಾನ ಇದು.ಮೊದಲ ದಿನ 120 ಕಾರ್ಡ್ ಬರೆಯುವುದರ ಮೂಲಕ ಪತ್ರ ಬರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿದ್ದ ಲೇಖಕರಾದ ಡಾ. ಸುಂದರ ಕೇನಾಜೆ ಅಭಿಯಾನಕ್ಕೆ ಚಾಲನೆ ನೀಡಿ ಪತ್ರದ ಮಹತ್ವ ಮತ್ತು ಪತ್ರವನ್ನು ಕ್ರಾಂತಿಗಾರಿಯಾಗಿ ಯಾವ ರೀತಿ ಬಳಸಬಹುದು, ಶಿಕ್ಷಣದ ಮಹತ್ವದ ಬಗ್ಗೆ ಮಾತಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮಾತಾಡಿದರು.

ಗ್ರಾಮಪಂಚಾಯತ್ ಸದಸ್ಯೆ ಉಷಾ ಗಂಗಾಧರ ಮಾವಂಜಿ, ಕೆವಿಜಿ ಮೆಡಿಕಲ್ ಕಾಲೇಜ್ನ ಪಿಆರ್ಒ ರಘುಪತಿ ಉಗ್ರಾಣಿಮನೆ, ಮಹಾವಿಷ್ಣುಮೂರ್ತಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಖ್ಯಾತ ಯಕ್ಷಗಾನ ಕಲಾವಿದರು ಯೋಗೀಶ್ ಶರ್ಮ ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಸ್ವಾಗತಿಸಿದರು, ಭಾರತಿ ಉಗ್ರಾಣಿಮನೇ ವಂದಿಸಿದರು. ಗ್ರಾಮದ ಎಲ್ಲಾ ಶಾಲೆಗಳಿಗೆ ಪೋಸ್ಟ್ ಕಾರ್ಡ್ ನೀಡಿ ಪತ್ರ ಬರೆಯುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ತಿಳಿಸಿದ್ದಾರೆ.