ಮಂಡೆಕೋಲು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ಸರಕಾರದ ಮತ್ತು ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿಯ ಯೋಜನೆ. ಇಲ್ಲಿ ಬರುವ ಅರ್ಜಿಗಳಲ್ಲಿ ಶೇ.70ರಷ್ಟನ್ನು ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನ ನಡೆಸಲಾಗುತಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ. ಸುಳ್ಯ ತಾಲೂಕು ಆಡಳಿತದ ವತಿಯಿಂದ ಮಂಡೆಕೋಲು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳೊಂದಿಗೆ ಸುಳ್ಯ ತಾಲೂಕು ವಿವಿಧ ಇಲಾಖಾಧಿಕಾರಿಗಳ ಗ್ರಾಮ ವಾಸ್ತವ್ಯ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವೈಯುಕ್ತಿಕ ಸಮಸ್ಯೆಗಳು ಸೇರಿ ಬಹುತೇಕ ಸಮಸ್ಯೆಗಳ
ಪರಿಹಾರ ಮಾಡುವ ಪ್ರಯತ್ನ ನಡೆಸಲಾಗಿದೆ. ಉಳಿದ ಕಡತಗಳು ಎಸಿ, ಎಡಿಸಿ ಹಂತದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲನೆ ನಡೆಸಿ ಪರಿಹಾರ ಕಂಡು ಕೊಳ್ಳಲಾಗುತ್ತದೆ. ಮಂಡೆಕೋಲು ಗ್ರಾಮದಲ್ಲಿ ವಿವಿಧ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ನಿನ್ನೆ ರಾತ್ರಿ ನಡೆದ ಚಾವಡಿ ಚರ್ಚೆ ಬಹಳ ಖುಷಿ ಕೊಟ್ಟಿದೆ ಮತ್ತು ಪರಿಣಾಮಕಾರಿಯಾಗಿತ್ತು ಎಂದ ಅವರು ಮುರೂರು ಚೆಕ್ ಪೋಸ್ಟ್ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಮಾರ್ಗ, ಉದ್ದಂತ್ತಡ್ಕ ಶಾಲೆಗಳ ದುರಸ್ಥಿಗೆ ತಲಾ ಎರಡು ಲಕ್ಷ ಅನುದಾನ ನೀಡಲಾಗುವುದು. ನಿವೇಶನ ರಹಿತರಿಗೆ ಮತ್ತು ಸರಕಾರಿ ಅಗತ್ಯಕ್ಕೆ ಸ್ಥಳ ಕಾಯ್ದಿರಿಸಲು ಸೂಚನೆ ನೀಡಲಾಗಿದೆ. ಅಡಿಕೆ ಹಳದಿ ರೋಗದ ಬಗ್ಗೆ ಸಂಶೋಧನೆ ನಡೆಸಿ ರೋಗಕ್ಕೆ ಔಷಧ ಕಂಡು ಹುಡುಕುವ ಪ್ರಯತ್ನ ನಡೆಯುತಿದೆ. ಶ್ಮಶಾನದ ಜಾಗದ ಸರ್ವೆ ಮಾಡಿ ಅಭಿವೃದ್ಧಿ ಮಾಡಲು ನಿರ್ದೇಶನ ನೀಡಲಾಗಿದೆ.ಗ್ರಾಮದಲ್ಲಿ ಹೈಸ್ಕೂಲ್, ಪಿಯು ಕಾಲೇಜು ಬೇಡಿಕೆ, ಆರೋಗ್ಯ ಉಪಕೇಂದ್ರದ ಬೇಡಿಕೆ, ಹೆಚ್ಚುವರಿ ಮೊಬೈಲ್ ನಿರ್ಮಾಣದ ಬೇಡಿಕೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು

ಜಿಲ್ಲಾಧಿಕಾರಿ ಹೇಳಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು ಅಧ್ಯಕ್ಷತೆ ವಹಿಸಿದ್ದರು.ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್,ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್, ಭೂದಾಖಲೆಗಳ ಉಪನಿರ್ದೇಶಕ ನಿರಂಜನ ಎಂ.ಎಂ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಮಂಜುಳಾ,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ, ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಮಾವಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ಅನಿತಾಲಕ್ಷ್ಮಿ ಸ್ವಾಗತಿಸಿದರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ ವಂದಿಸಿದರು.ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿದರು.ಡೆಪ್ಯುಟಿ ತಹಶೀಲ್ದಾರ್ ಚಂದ್ರಕಾಂತ ಎಂ.ಆರ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ವಲಯ ಅರಣ್ಯಾಧಿಕಾರಿ ಆರ್. ಗಿರೀಶ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನಿತಿನ್ ಪ್ರಭು, ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಜಿಪಂ ಇಂಜಿನಿಯರಿಂಗ್ ಉಪವಿಭಾಗದ ಎಇಇ ಹನುಮಂತರಾಯಪ್ಪ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ, ನ.ಪಂ.ಮುಖ್ಯಾಧಿಕಾರಿ ಸುಧಾಕರ್,ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಮತ್ತಿತರ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.