*ಗಣೇಶ್ ಮಾವಂಜಿ.
ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ನಡೆಯುವ ಸಾಂಸ್ಕೃತಿಕ ಸಂಭ್ರಮ ಪ್ರೇಕ್ಷಕರ ಕಣ್ಮನ ತಣಿಸುತ್ತಿದೆ. ಆಕರ್ಷಕ ವೇದಿಕೆಯಲ್ಲಿ ಕಣ್ಕುಕುಕ್ಕುವ ಬಣ್ಣಬಣ್ಣದ ಲೈಟಿಂಗ್ಸ್ ಗಳು, ಕಿವಿಗಿಂಪಾದ ಸಂಗೀತದ ಅಲೆ.., ವೇದಿಕೆಗೆ
ಮೆರುಗನ್ನೀಯುವ ಕಾಷ್ಠ ಕಲೆಗಳ ಶೃಂಗಾರ…ಅದರಲ್ಲಿ ಭಾರತೀಯ ಸಂಸ್ಕೃತಿಗಳಿಗೆ ಕನ್ನಡಿ ಹಿಡಿಯುವಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ಸೂರೆಗೊಳ್ಳುತ್ತಿವೆ.
ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಪ್ರಿಲ್ 27 ರಿಂದ ಆರಂಭಗೊಂಡ ಕಾರ್ಯಕ್ರಮಗಳ ಅಂಗವಾಗಿ ಮೊದಲ ದಿನ ಊರಿನ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಭಿಕರು ಕಿಕ್ಕಿರಿದು ತುಂಬಿದ್ದರು. ಬಳಿಕ ತುಳುನಾಡ ಗಾನ ಗಂಧರ್ವ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ನಡೆದ ಸಂಗೀತ ಗಾನ ಸಂಭ್ರಮಕ್ಕೂ ಎಲ್ಲೂ ಪ್ರೇಕ್ಷಕರ ಕೊರತೆ ಕಂಡು ಬರಲಿಲ್ಲ.
ಎಪ್ರಿಲ್ 28 ರ ಭಾನುವಾರದ ಕಾರ್ಯಕ್ರಮಗಳೂ ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಸಭಾ ಕಾರ್ಯಕ್ರಮದ ಬಳಿಕ ನಾಟ್ಯ ನಿಲಯಂ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ ನೃತ್ಯ ವಿದುಷಿ ಕು.ಅಪೂರ್ವ ಮತ್ತು ಬಳಗದವರಿಂದ ನಡೆದ ನೃತ್ಯ ವೈವಿಧ್ಯ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿತು. ಧ್ವನಿಸುರುಳಿಯ ಮೊರೆ ಹೋಗದೆ ನುರಿತ ಕಲಾವಿದರಿಂದಲೇ ವೇದಿಕೆಯಲ್ಲೇ ಹಾಡು, ಸಂಗೀತಗಳ ಅಳವಡಿಕೆ ಮಾಡಿರುವುದು ಈ ಕಾರ್ಯಕ್ರಮದ ಹೈಲೈಟ್ ಆಗಿತ್ತು.
ಇಂದು ಗ್ರಂಥಾಲಯದ ಮಕ್ಕಳಿಂದ ಯಕ್ಷಗಾನ:
ಮಂಡೆಕೋಲು ಗ್ರಂಥಾಲಯದ ಮಕ್ಕಳು ಇಂದು ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಊರಿನ ಪುಟಾಣಿ ಮಕ್ಕಳು
ಯಕ್ಷ ಗುರುಗಳಾದ ಯೋಗೀಶ್ ಶರ್ಮ ಅಳದಂಗಡಿ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ನಾಟ್ಯ ಕಲಿಯುತ್ತಿದ್ದು, ಸೋಮವಾರ ರಾತ್ರಿ 8.30 ಕ್ಕೆ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ‘ಏಕಾದಶಿ ದೇವಿ ಮಹಾತ್ಮೆ’ ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಮಕ್ಕಳ ಯಕ್ಷಗಾನದ ಬಳಿಕ ಮಂಗಳಾ ದೇವಿ ಮೇಳದ ಕಲಾವಿದರಿಂದ ‘ಸಾರ್ಲಪಟ್ಟೊದ ಸತ್ಯ’ ಎಂಬ ಯಕ್ಷಗಾನ ಬಯಲಾಟ ಇಂದು ನಡೆಯಲಿದೆ.