ಸುಳ್ಯ: ಕರಿಕೆ ಮಂಞಡುಕ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವ ಫೆ.19ರಿಂದ ಆರಂಭಗೊಂಡಿದ್ದು 8 ದಿನಗಳ ಕಳಿಯಾಟ ಮಹೋತ್ಸವ 26ರವರೆಗೆ ನಡೆಯಲಿದೆ. ಫೆ.25ರಂದು ಬೆಳಿಗ್ಗೆ ಶ್ರೀ ಮುನ್ನಾಯರೀಶ್ವರ ದೈವ ಹೊರಡಲಿದೆ.ಸಂಜೆ 4ಕ್ಕೆ ಮುನ್ನಾಯರೀಶ್ವರ ದೈವದ ಮುಡಿ ಅವರೋಹಣವಾಗಲಿದೆ. ಫೆ.26ರಂದು ಶ್ರೀ ತುಳೂರ್
ವನತ್ ಭಗವತಿ ಅಮ್ಮ ಮತ್ತು ಶ್ರೀ ಕ್ಷೇತ್ರಪಾಲಕನೀಶ್ವರ ಹೊರಡಲಿದೆ. ಸಂಜೆ 3.30ಕ್ಕೆ ಮುಡಿ ಅವರೋಹಣ ನಡೆಯಲಿದೆ ಎಂದು ಮಂಞಡುಕ್ಕ ಕೊಟ್ಟಾರದ ಪ್ರಕಟಣೆ ತಿಳಿಸಿದೆ.
ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಗಳ ಗಡಿ ಪ್ರದೇಶವಾದ ಮಂಞಡುಕದ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರ ಕೇರಳ ಹಾಗು ಕರ್ನಾಟಕದ ಭಕ್ತರು ಆರಾಧಿಸುವ ಕಾರಣಿಕ ಕ್ಷೇತ್ರವಾಗಿದೆ.ಮಹಾ ಶಿವರಾತ್ರಿಯ ದಿನ ಅರ್ಧ ರಾತ್ರಿಯ ವೇಳೆ ಕ್ಷೇತ್ರದ ತೆಂಕಿನ ಬಾಗಿಲು ತೆರೆದು ಮರುದಿನ ಆರಂಭಗೊಂಡು ಪ್ರತಿ ವರ್ಷ ಎಂಟು ದಿನಗಳ ಕಾಲ ನಡೆಯುವ ಕಳಿಯಾಟ ಮಹೋತ್ಸವದಲ್ಲಿ 101 ದೈವ ಕೋಲ ನಡೆಯುತ್ತದೆ. ಶ್ರೀ ಮುನ್ನಾಯರೀಶ್ವರ, ತುಳೂರ್ ವನತ್ ಭಗವತಿ ಇಲ್ಲಿನ ಪ್ರಮುಖ ಆರಧನಾ ಶಕ್ತಿ. ಜಾತ್ರೋತ್ಸವ ಸಂದರ್ಭದಲ್ಲಿ ಕೇರಳ ಹಾಗು ಕರ್ನಾಟಕ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.