ಸುಳ್ಯ: ಸುಳ್ಯ ತಾಲೂಕು ಹಿಂದೂ ರಕ್ಷಣಾ ಸಮಿತಿಯ ವತಿಯಿಂದ ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜನಜಾಗೃತಿಗಾಗಿ ‘ಮಾನವ ಸರಪಳಿ’ ಕಾರ್ಯಕ್ರಮ ಸುಳ್ಯ ನಗರದಲ್ಲಿ ನಡೆಯಿತು. ಪ್ಲೆಕ್ಸ್ ಹಿಡಿದು ನಗರದ ಮುಖ್ಯ ರಸ್ತೆಯ
ಬದಿಯಲ್ಲಿ ಮಾನವ ಸರಪಳಿ ರೂಪಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಆರ್ಎಸ್ಎಸ್ ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ, ಮುಖಂಡರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಸುಬೋದ್ ಶೆಟ್ಟಿ ಮೇನಾಲ, ವಿನಯಕುಮಾರ್ ಕಂದಡ್ಕ, ಎ.ಟಿ.ಕುಸುಮಾಧರ, ಡಾ.ಮನೋಜ್ ಅಡ್ಡಂತ್ತಡ್ಕ ಮತ್ತಿತರರು ಸರಪಳಿಯಲ್ಲಿ ಭಾಗವಹಿಸಿದರು. ಬಾಂಗ್ಲಾದಲ್ಲಿರುವ ಹಿಂದುಗಳ ರಕ್ಷಣೆ ಮಾಡಬೇಕು, ದಾಳಿಯಿಂದ ನಾಶವಾದ ದೇವಸ್ಥಾನಗಳನ್ನು ಪುನರ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಬಾಂಗ್ಲಾ ಸರಕಾರವನ್ನು ಒತ್ತಾಯಿಸಬೇಕು ಎಂದು ಕೇಂದ್ರ ಸರಕಾರವನ್ನು ಹಿಂದೂ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.