ಸುಳ್ಯ:ಕುಟುಂಬದ ಪೋಷಣೆಯಿಂದ ಹಿಡಿದು ಯುದ್ಧ ಭೂಮಿಯ ತನಕ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಸಾರ್ವಜನಿಕ ಬದುಕಿನಲ್ಲಿ ಇನ್ನಷ್ಟು ಸೇವೆ ಮಾಡುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಎರಡು ದಿನಗಳ ಕಾಲ ನಡೆದ ಸುಳ್ಯ ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಬೆಳ್ಳಿ ಹಬ್ಬ ‘ರಜತ ಸಂಭ್ರಮ’ದ ಸಮಾರೋಪ ಸಮಾರಂಭದ
ಅಧ್ಯಕ್ಷತೆ ವಹಿಸಿ, ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸಮಾರೋಪ ಭಾಷಣ ಮಾಡಿದ ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋದಾ ರಾಮಚಂದ್ರ ಮಾತನಾಡಿ ‘ಮಹಿಳೆಯರು ಅತ್ಯುತ್ತಮ ಶಿಕ್ಷಣ ಪಡೆದು, ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಸ್ವಾವಲಂಬಿಯಾಗಿ ಬದುಕಬೇಕು ಎಂದು ಹೇಳಿದರು. ಸಂಸ್ಕಾರಯುತ ಮತ್ತು ಮೌಲ್ಯಯುತ ಸಮಾಜವನ್ನು ಕಟ್ಟುವುದರಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎಂದ ಅವರು ಕುಟುಂಬ ಹಾಗೂ ಸಮಾಜವನ್ನು ಪೋಷಿಸುವ ಮಹಿಳೆಯರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಿ ರಾಧಾಕೃಷ್ಣ ಮಾಣಿಬೆಟ್ಟು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು ಮುಖ್ಯ ಅತಿಥಿಯಾಗಿದ್ದರು. ಶ್ರೀರಾಮ ಭಜನಾ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಹರಿಶ್ಚಂದ್ರ, ಕಪಿಲ ಯುವಕ ಮಂಡಲದ ಅಧ್ಯಕ್ಷ ಹರೀಶ್ ಜೆ.ಬಿ ಗೌರವ ಅತಿಥಿಗಳಾಗಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಾದ ನಳಿನಾಕ್ಷಿ ಹೆಚ್(ಆರೋಗ್ಯ ಸೇವೆ), ಕೆ.ಆರ್.ಗೋಪಾಲಕೃಷ್ಣ (ಸಂಗೀತ), ಜಲಜಾಕ್ಷಿ ಕೆ.ಡಿ.(ಶಿಕ್ಷಣ), ರಾಮಚಂದ್ರ ಪೆಲ್ತಡ್ಕ(ಸಮಾಜ ಸೇವೆ), ರಘುನಾಥ ಜಟ್ಟಿಪಳ್ಳ (ಸಂಘಟನೆ), ಎನ್.ಎ.ಅಬ್ದುಲ್ಲ ಜಟ್ಟಿಪಳ್ಳ (ಸಮಾಜಸೇವೆ) ಅವರನ್ನು ಸನ್ಮಾನಿಸಲಾಯಿತು.

ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಸ್ವಾಗತಿಸಿದರು. ಮಾನಸ ಮಹಿಳಾ ಮಂಡಲದ ಗೌರವಾಧ್ಯಕ್ಷೆ , ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷೆ ಚಂದ್ರಾಕ್ಷಿ ಕೆ.ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಗೌರವಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಪ್ರಧಾನ ಕಾರ್ಯದರ್ಶಿ ಸುನೀತ ರಾಮಚಂದ್ರ,
ಕಾರ್ಯದರ್ಶಿ ಶೈಲಜ ಪಿ. ಶೆಟ್ಟಿ ಕೋಶಾಧಿಕಾರಿ ಸವಿತಾ ಲಕ್ಷ್ಮಣ ಆಚಾರ್ಯ, ಸ್ಮರಣ ಸಂಚಿಕೆ ಸಂಪಾದಕಿ ಸುಮತಿ ರಘುನಾಥ ಮತ್ತಿತರರು

ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅನನ್ಯ ಅನಿಲ್ ಹಾಗೂ ಕುಲ್ದೀಪ್ ಪೆಲ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ, ರಮಾನಂದ ರೈ ಜಟ್ಟಿಪಳ್ಳ ಸಂತೋಷ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ರಜತ ಸಂಭ್ರಮದ ಅಂಗವಾಗಿ ಮೆರವಣಿಗೆ, ವಿಚಾರಗೋಷ್ಠಿ, ಸಾಧಕರ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.







